Skip to main content
www.kallianpur.com | Email : kallianpur7@gmail.com | Mob : 9741001849

ಪೇಜಾವರ ಮಠದಲ್ಲಿ ಶ್ರೀ ಪುರಂದರದಾಸರ ಆರಾಧನೆಯ ಪುಣ್ಯದಿನ ಆಚರಣೆ ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಸಾರಥ್ಯದಲ್ಲಿ ವಿಶೇಷ ಭಜನೆ.

By January 30, 2025News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಜ.30: ಉಡುಪಿ ಶ್ರೀ ಪೇಜಾವರ ಮಠ ಇದರ ಮುಂಬಯಿ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠದಲ್ಲಿ ಕಳೆದ ಬುಧವಾರ ಶ್ರೀ ಪುರಂದರದಾಸರ ೪೫೭ನೇ ಆರಾಧನೋತ್ಸವ, ಪುಣ್ಯದಿನ ನಿಮಿತ್ತ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ನಡೆಸಲ್ಪಟ್ಟಿತು. ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಸಂದೇಶವಿತ್ತು ಹರಸಿದರು.

ಪೇಜಾವರಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ತಮ್ಮ ಸಂದೇಶದೊಂದಿಗೆ ಗೋರಕ್ಷಣೆ ಪ್ರತಿಯೊಬ್ಬ ಮಾನವನ ಮುಖ್ಯ ಕರ್ತವ್ಯ. ಅದು ಪೂರ್ಣರೂಪದಿಂದ ಯಶಸ್ವಿ ಆಗಬೇಕಾದರೆ ಭಗವಂತನ ಅನುಗ್ರಹವೂ ಅವಶ್ಯವಾಗಿರುತ್ತದೆ. ಈ ಉದ್ದೇಶದಿಂದ ಎಲ್ಲ ಮಠ-ಮಂದಿರ, ಸಂಘ-ಸಂಸ್ಥೆಗಳ ಮೂಲಕ ಎಲ್ಲರೂ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ನಡೆಸಬೇಕು ಅನ್ನೋದು ನಾವು ಸಂಕಲ್ಪಮಾಡಿದ್ದೇವೆ. ನಮ್ಮ ಆದೇಶನುಸಾರ ಶ್ರೀ ಪುರಂದರದಾಸರ ಆರಾಧನೆಯ ಪುಣ್ಯದಿನದಂದು ಮುಂಬಯಿಯಲ್ಲಿನ ಸುಮಾರು 30 ಭಜನಾಮಂಡಳಿಗಳ ಕೂಡುವಿಕೆಯಿಂದ ಮುಂಬಯಿಯಲ್ಲಿನ ಶ್ರೀ ಪೇಜಾವರ ಮಠದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ವಿಧಿವತ್ತಾಗಿ ನಡೆದಿರುವುದು ಸ್ತುತ್ಯರ್ಹ. ನಮ್ಮ ಮಠದಲ್ಲಿ ನಡೆದ ಈ ಕಾರ್ಯಕ್ರಮವನ್ನು ಗಮನಿಸಿ ಪಾಲ್ಗೊಂಡ ಎಲ್ಲಾ ಭಕ್ತಾಭಿಮಾನಿಗಳನ್ನು ತುಂಬು ಹೃದಯದಿಂದ ಆಶೀರ್ವದಿಸುತ್ತೇವೆ ಎಂದರು.

ಗೋರಕ್ಷಣೆಗೋಸ್ಕರ ಗೋವುಗಳೆಲ್ಲ ಕ್ಷೇಮವಾಗಿರಲು ಆರಾಜಕತೆ ದೂರವಾಗುವ ಸಲುವಾಗಿ ದೇವರಿಗೆ ಮೊರೆ ಹೋಗಬೇಕು ಅನ್ನುವ ನೆಲೆಯಲ್ಲಿ ಮುಂಬಯಿ ಮಠದಲ್ಲಿ ಭಜನೆ ಮಂಡಳಿಗಳು ಒಗ್ಗೂಡಿ ಭಜನೆ, ಮಠದ ಆರ್ಚಕ ವೃಂದ ವಿಷ್ಣುಸಹಸ್ರನಾಮ ಪಾರಾಯಣ ನಡೆಸುವ ಮೂಲಕ ಭಗವಂತನಲ್ಲಿ ಪ್ರಾಥಿಸುವ ವಿಚಾರ ತಿಳಿದು ತುಂಬಾ ಸಂತೋಷವಾಯಿತು. ಈ ಪಾರಾಯಣ ಯಜ್ಞದಲ್ಲಿ ಪಾಲ್ಗೋಂಡ ಎಲ್ಲಾ ಸದಸ್ಯರಿಗೂ ನೀವು ಮಾಡುವ ಪ್ರಾರ್ಥನೆಯಿಂದ ಲೋಕ ಕ್ಷೇಮವಾಗಲಿ ಎಂದು ದೇವರಲ್ಲಿ ಪ್ರಾಥಿಸುತ್ತೇನೆ ಎಂದೂ ಶ್ರೀಪಾದಂಗಳವರು ಆಶೀರ್ವಚನ ನುಡಿಗಳನ್ನಿತ್ತರು.

ಆರಂಭದಲ್ಲಿ ಪೇಜಾವರ ಮಠದಲ್ಲಿನ ಶಿಲಾಮಯ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಸನ್ನಿಧಾನದಲ್ಲಿ ಆರ್ಚಕ ರಾಮಚಂದ್ರ ಸಾಮಗ ಶಾಸ್ತ್ರಾನುಸಾರ ದೈನಂದಿನ ಪೂಜಾಧಿಗಳನ್ನು ನೆರವೇರಿಸಿದರು. ಬಳಿಕ ಮೆರವಣಿಗೆಯಲ್ಲಿ ದಾಸರ ಭಾವಚಿತ್ರವನ್ನು ಮಧ್ವ ಭವನದ (ಪೇಜಾವರ ಮಠ) ಶ್ರೀ ವಿಶ್ವೇಶ ತೀರ್ಥ ಸಭಾಗೃಹಕ್ಕೆ ಬರಮಾಡಿಕೊಂಡು ಅಲಂಕೃತ ಮಂಟಪದಲ್ಲಿ ಸ್ಥಾಪಿಸಲಾಯಿತು. ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಶ್ರೀ ಪುರಂದರದಾಸರ ಆರಾಧನಾ ಪೂಜೆ ನೆರವೇರಿಸಿ ಅನುಗ್ರಹಿಸಿದರು. ಪೇಜಾವರ ಮಠದ ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಸಾರಥ್ಯದಲ್ಲಿ ವಿಶೇಷ ಭಜನೆ ನಡೆದಿದ್ದು, ಸುಮಾರು ೩೦ ಭಜನಾ ಮಂಡಳಿಗಳ ಕೂಡುವಿಕೆಯಿಂದ ಭಜನೆ, ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ನಡೆಯಿತು.

ಶ್ರೀ ಪೇಜಾವರ ಮಠದ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ವಿದ್ವಾನ್ ಕೆರ್ವಾಶೆ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಭಾರ್ಗವ ಆಚಾರ್ಯ, ಪುರೋಹಿತರುಗಳದ ಪವನಕುಮಾರ್ ಅಣ್ಣಿಗೇರಿ, ಪ್ರವೀಣ್ ಜೋಶಿ, ರಮೇಶ್ ಭಟ್, ವಿಷ್ಣುತೀರ್ಥ ಸಾಲಿ, ರಾಧಾಕೃಷ್ಣ  ಭಟ್, ವಾಸುದೇವ ರಾವ್, ಎನ್.ವಿ ಹೆಬ್ಬಾರ್ ಮತ್ತು ಆರ್ಚಕ ವರ್ಗವು ಪೂಜಾಧಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಷ್ಣುಸಹಸ್ರನಾಮ ನಡೆಸಿದರು. ಭಕ್ತಾದಿಗಳನೇಕರು ಉಪಸ್ಥಿತರಿದ್ದು ಭಜನಾ ಸ್ಪರ್ಧೆಯೂ ನಡೆಸಲ್ಪಟ್ಟಿತು. ತೀರ್ಪುಗಾರರಾಗಿ ಮಮತಾ ರಾವ್, ಅಹಲ್ಯಾ ರಾವ್ ಸಹಕರಿಸಿದ್ದು ಕೊನೆಯಲ್ಲಿ ವಿಜೇತ ಮಂಡಳಿಗೆಳಿಗೆ ಬಹುಮಾನ, ಫಲಕಗಳನ್ನಿತ್ತು ಅಭಿನಂದಿಸಲಾಯಿತು. ಶ್ರೀನಿವಾಸ ಭಟ್ ಪರೇಲ್ ಅವರು ಪುರಂದರದಾಸರ ಕೀರ್ತನೆಗೈದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.