
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.೧೪: ನಿತ್ಯ ಸುಮಂಗಳೆಯಾಗಿ ಮೆರೆಯುವ ತುಳುನಾಡುನಿಂದ ಮುಂಬಯಿಗೆ ಬಂದ ಬಂಟರು ಸರ್ವ ಶ್ರೇಷ್ಠರು. ಆದ್ದರಿಂದಲೇ ಬಂಟರ ಸಂಕಲ್ಪವೂ ಸರ್ವ ಶ್ರೇಷ್ಠವಾದುದು. ಸೋಮವಾರದ ಈಶ್ವರನ ಈ ಸುದಿನ ೨೦೨೫ರ ಸಾಲಿನ ಬಿಸುಪರ್ಬ ಬಂಟರ ಪಾಲಿನ ವೈಶಿಷ್ಟತೆಯ ಯುಗಾದಿಯಾಗಿದೆ. ಮುಂಬಯಿಯ ಮರಾಠಿ ಮಣ್ಣಿನಲ್ಲಿ ವೈಭವೋಪೇತವಾಗಿ ಯುಗಾದಿಯನ್ನು ಹೊಸ ವರ್ಷಾಚರಣೆಯಾಗಿ ಆಚರಿಸುತ್ತಿರುವುದು ಬಂಟರ ಊರ್ಜಿತ ಖುಷಿಯಾಗಿದೆ. ಮನುಜರಿಗೆ ಚಿಂತೆ ಇಲ್ಲದ ಬದುಕು ಎಂದಿಗೂ ಇಲ್ಲ, ಆದರೆ ಅದನ್ನು ಮರೆತು ದೇವರ ಪ್ರೀತಿ, ಸ್ನೇಹ, ಸಂಬಂಧಗಳನ್ನು ನೀಡಿದ್ದು ಇದನ್ನೇ ಮೇಲ್ಪಂಕ್ತಿಯಾಗಿಸಿ ಸಮಾರಸ್ಯದಿಂದ ಬಾಳೋಣ. ಒಳ್ಳೆಯ ಮನಸ್ಸಿನಿಂದ ಆಲೋಚಿಸಿ ಕೊಂಡಾಗ ಬರೇ ಮನುಷ್ಯನಲ್ಲ ದೇವರೂ ಸಹಕಾರ ನೀಡುತ್ತಾನೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು.
ಇಂದಿಲ್ಲಿ ಸೋಮವಾರ ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟ್ಸ್ ಸಂಘ ಮುಂಬಯಿ ತನ್ನ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಿದ್ದ ಬಂಟ್ಸ್ ಡೇ, ಬಿಸು ಪರ್ಬ ಮತ್ತು ಶ್ರೀಮಹಾವಿಷ್ಣು ಕೃಪಾ ಬಂಟ ಯಕ್ಷಗಾನ ಕಲಾ ವೇದಿಕೆಯ ವಾರ್ಷಿಕೋತ್ಸವ ಹಾಗೂ ೨೦೨೫ನೇ ವಾರ್ಷಿಕ ಸ್ನೇಹ ಸಮ್ಮೀಲನದ ಸಭಾಧ್ಯಕ್ಷತೆ ವಹಿಸಿ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿದರು.
ಬಳಿಕ ಸಭಾಗೃಹದಲ್ಲಿ ನಡೆಸಲ್ಪಟ್ಟ ಚತುರ್ಥ ಆಚರಣೆಗಳಿಗೆ ಮಾಜಿ ಸಂಸದ ಗೋಪಾಲ್ ಸಿ.ಶೆಟ್ಟಿ ಆಗಮಿಸಿ ದೀಪ ಪ್ರಜ್ವಲಿಸಿ ಚಾಲನೆ ಯನ್ನಿತ್ತರು. ಮುಖ್ಯ ಅತಿಥಿಯಾಗಿ ಸಾಯಿ ಪ್ಯಾಲೇಸ್ ಹೋಟೆಲು ಸಮೂಹದ ಆಡಳಿತ ನಿರ್ದೇಶಕ ರವಿಸುಂದರ್ ಶೆಟ್ಟಿ, ಗೌರವ ಅತಿಥಿ ಗಳಾಗಿ ಉಡುಪಿ ಟು ಮುಂಬಯಿ ಹೋಟೆಲು ಸಮೂಹದ ಆಡಳಿತ ನಿರ್ದೇಶಕ ಶಿವಚಂದ್ರ ಶೆಟ್ಟಿ, ಐಟಿಡಿ ಸಿಮೆಂಟೇಶನ್ ಇಂಡಿಯಾ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ರವೀಂದ್ರನಾಥ್ ಜಿ.ಶೆಟ್ಟಿ, ತುಂಗಾ ಹೊಟೇಲು ಸಮೂಹದ ಕಾರ್ಯಾಧ್ಯಕ್ಷ ಸುಧಾಕರ್ ಎಸ್.ಹೆಗ್ಡೆ, ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಹಾಗೂ ಸಂಘದ ಉಪಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ| ರಮೇಶ್ ಬಿ.ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಆರ್.ಶೆಟ್ಟಿ ತೆಳ್ಳಾರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್.ಶೆಟ್ಟಿ, ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಮಿತಿ ಕಾರ್ಯಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ವೇದಿಕೆಯಲ್ಲಿ ಆಸೀನರಾಗಿದ್ದರು.
ಸಮುದಾಯದ ಏಳ್ಗೆಗಾಗಿ ಪರಿಶ್ರಮ ಎಲ್ಲರೂ ಮಾಡುತ್ತಾರೆ ಆದರೆ ಬಂಟರ ಪರಿಶ್ರಮ ಅದ್ವೀತಿಯವಾದುದು. ಆದ್ದರಿಂದ ಬಂಟರ ಬದ್ಧತೆಯ ಸ್ಥಿರತೆ ವೈಶಿಷ್ಟಮಯವಾಗಿದೆ. ಸಮುದಾಯ, ಸಮಾಜಗಳ ಮೇಲಿನ ಕಾಳಜಿ, ಶ್ರದ್ಧೆ, ಪರಿಶ್ರಮದ ಮುನ್ನಡೆಯಿಂದ ಬಂಟ ಸಮಾಜ ಈ ಮಟ್ಟದ ಶ್ರೇಯೋಭಿವೃದ್ಧಿಗೆ ಸಾಗಿದೆ. ಇಂತಹ ಬಂಟರು ಭಾವೀ ಯುವ ಜನತೆಗೆ ಪ್ರೇರಕರಾಗಿದ್ದಾರೆ ಎಂದು ಗೋಪಾಲ್ ಶೆಟ್ಟಿ ತಿಳಿಸಿದರು.
ಈ ಶುಭಾವಸರದಿ ಸಂಘದ ಪದಾಧಿಕಾರಿಗಳನ್ನೊಳಗೊಂಡು ಅಧ್ಯಕ್ಷರು ಕಾಪು ಹೊಸ ಮಾರಿಗುಡಿ ಇದರ ಧರ್ಮದರ್ಶಿ ವಾಸುದೇವ್ ಶೆಟ್ಟಿ, ಗುತ್ತಿನಾರ್ ರವೀಂದ್ರ ಡಿ.ಶೆಟ್ಟಿ ಕೊಟ್ರಪಾಡಿಗುತ್ತು (ಪತ್ನಿ ಆರ್.ವನಿತಾ ಶೆಟ್ಟಿ ಸಹಿತ) ಮತ್ತು ಡಾ| ತೃಪ್ತಿ ಶಿವರಾಮ ಶೆಟ್ಟಿ (ತಾಯಿ ಯಶೋಧಾ ಎಸ್.ಶೆಟ್ಟಿ ಸಹಿತ) ಇವರಿಗೆ ವಿಶೇಷ ಅಭಿನಂದನಾ ಸನ್ಮಾನ ಪ್ರದಾನಿಸಿ ಶುಭಾರೈಸಿದರು.
ಅಂತೆಯೇ ಸಂಘವು ವಾರ್ಷಿಕವಾಗಿ ಕೊಡ ಮಾಡುವ ಪ್ರಶಸ್ತಿ ಸಮಾರಂಭ ನಡೆಸಲಾಗಿದ್ದು ಕಣಂಜಾರು ಆನಂದ್ ಶೆಟ್ಟಿ ಸ್ಮಾರಕ ಪ್ರಶಸ್ತಿ ಯನ್ನು ಯಕ್ಷಗಾನ ಕಲಾವಿದ ವಾಸು ಶೆಟ್ಟಿ ಮಾರ್ನಾಡ್ ಇವರಿಗೆ, ಜ್ಯೋತಿ ಆರ್.ಎನ್ ಶೆಟ್ಟಿ ಪ್ರಾಯೋಜಕತ್ವ ದ ಶ್ರೀಮತಿ ಪ್ರೇಮ ನಾರಾಯಣ್ ರೈ ಪ್ರಶಸ್ತಿಯನ್ನು ಪುಣೆಯ ಸಮಾಜ ಕಾರ್ಯಕರ್ತೆ ಗೀತಾ ಭಾಸ್ಕರ ಶೆಟ್ಟಿ ಇವರಿಗೆ ಅತಿಥಿಗಳು ಪ್ರದಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಿ.ಆರ್ ಶೆಟ್ಟಿ, ಡಾ| ಪದ್ಮನಾಭ ವಿ.ಶೆಟ್ಟಿ, ರಂಜನಿ ಸುಧಾಕರ್ ಹೆಗ್ಡೆ, ರವೀಂದ್ರ ಎಂ.ಭಂಡಾರಿ, ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಆಯ್ಕೆ ಸಮಿತಿಯ ಡಾ| ಸುನೀತಾಎಂ.ಶೆಟ್ಟಿ, ಕೆ.ಕೆ ಶೆಟ್ಟಿ, ಸುಕುಮಾರ್ ಎನ್.ಶೆಟ್ಟಿ, ಕಿಶೋರ್ ಕುಮಾರ್ ಕುತ್ಯಾರು, ಕಣಂಜೂರು ಪರಿವಾರ ಹಾಗೂ ಮಹಿಳಾ ವಿಭಾಗದ ಉಪಾಧ್ಯಕ್ಷೆ ಕವಿತಾ ಐ.ಆರ್ ಶೆಟ್ಟಿ, ಕಾರ್ಯದರ್ಶಿ ಆಶಾ ಎಸ್.ಶೆಟ್ಟಿ ಮತ್ತು ಪದಾಧಿಕಾರಿಗಳು, ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಸಂಘದ ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ (ಜ್ಞಾನ ಮಂದಿರ) ಪ್ರತಿಷ್ಠಾಪಿತ ಶ್ರೀಮಹಾವಿಷ್ಣು, ಶ್ರೀ ಮಹಾಗಣಪತಿ, ಕಟೀಲು ಶ್ರೀ ದುರ್ಗಪರಮೇಶ್ವರಿ ದೇವರಿಗೆ ಮಂದಿರದ ಆರ್ಚಕ ವೇ| ಮೂ| ನಾಗೇಂದ್ರ ಭಟ್ ಕಡಿಯಾಳಿ ಪೂಜೆಗಳನ್ನು ನೇರವೇರಿಸಿ ಮಹಾರಾತಿ ಯೊಂದಿಗೆ ಅಧ್ಯಕ್ಷರಿಗೆ ಪ್ರಸಾದವನ್ನಿತ್ತು ಸಂಭ್ರಮಕ್ಕೆ ಅನುಗ್ರಹಿಸಿದರು. ಮಹಿಳಾಧ್ಯಕ್ಷೆ ಚಿತ್ರಾ ಆರ್.ಶೆಟ್ಟಿ ಪದಾಧಿಕಾರಿಗಳೊಂದಿಗೆ ಬ್ಯಾಂಡು, ವಾದ್ಯ, ತಾಸೆಗಳ ನೀನಾದದೊಂದಿಗೆ ಶ್ರೀದೇವರಿಗೆ ಅರ್ಪಿಸಿದ ಬಿಸುಕಣಿಯೊಂದಿಗೆ (ಫಲಪುಷ್ಪ, ತರಕಾರಿ) ವೇದಿಕೆಗೆ ಆಗಮಿಸಿ ಕೇದಗೆಗರಿ ಗಳಿಂದ ನಿರ್ಮಿಸಲಾಗಿದ್ದ ದೈವಮಂಟದ ಕೊಡಿಯಡಿಯಲ್ಲಿರಿಸಿ (ಪಡಿಮಂಚಾವು) ಸಂಪ್ರದಾಯಿಕವಾಗಿ ನಮಿಸಿ ನೂತನ ವರ್ಷದ ಹರ್ಷಕ್ಕಾಗಿ ಪ್ರಾರ್ಥಿಸಿದರು. ಬಳಿಕ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಬಂಟಧ್ವಜ ಆರೋಹಣಗೈದು, ನೇಜಿಗೆ ಹಾಲು ಸುರಿದು, ಭತ್ತ ತುಂಬಿದ ಕಲಸೆಯಲ್ಲಿ ಕಲ್ಪವೃಕ್ಷದ ಹಿಂಹಾರ ಅರಳಿರಿಸಿ ಆಚರಣೆಗೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತರು.
ಸಂಘದ ವಿಶ್ವಸ್ಥ ಸದಸ್ಯರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಮತ್ತು ಯುವ ವಿಭಾಗಗಳ ಮುಖ್ಯಸ್ಥರು, ಪ್ರಾದೇಶಿಕ ಸಮಿತಿಗಳ ಸಂಯೋಜಕರು ಮತ್ತು ಕಾರ್ಯಾಧ್ಯಕ್ಷರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ಸುರೇಶ್ ಶೆಟ್ಟಿ ಶಿಬರೂರು ಮತ್ತು ಬಂಟರ ಭವನದ ವ್ಯವಸ್ಥಾಪಕ ಪ್ರವೀಣ್ ಶೆಟ್ಟಿ ವಾರಂಗ ಸಹಕರಿ ಸಿದರು.
ಬಂಟಗೀತೆಯೊಂದಿಗೆ ಉತ್ಸವ ಆದಿಗೊಂಡಿದ್ದು ಅಧ್ಯಕ್ಷ ಪ್ರವೀಣ್ ಶೆಟ್ಟಿ ಬಂಟಧ್ವಜ ಆರೋಹಣಗೈದರು. ಪ್ರವೀಣ್ ಪ್ರಕಾಶ್ ಶೆಟ್ಟಿ ಮತ್ತು ಶೋಭಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ನವೀನ್ ಶೆಟ್ಟಿ ಇನ್ನಬಾಳಿಕೆ ಸ್ವಾಗತಿಸಿ ಪ್ರಸ್ತಾವನೆಗೈದರು. ಅಶೋಕ್ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಿಎ| ರಮೇಶ್ ಬಿ.ಶೆಟ್ಟಿ ವಂದನಾರ್ಪಣೆಗೈದರು.
ಬಂಟ್ಸ್ ಸಂಘದ ಪ್ರಾದೇಶಿಕ ಸಮಿತಿಗಳ ಪ್ರತಿಭಾನ್ವಿತ ಕಲಾವಿದರು ಮತ್ತು ಮಹಿಳಾ ವಿಭಾಗದ ಕಲಾವಿದರು ಮೆಗಾ ಸಾಂಸ್ಕ್ರತಿಕ ಕಾರ್ಯ ಕ್ರಮಗಳನ್ನು ಪ್ರಸ್ತುತ ಪಡಿಸಿದರು. ಬಂಟ್ಸ್ ಸಂಘ ಮುಂಬಯಿ ಸದಸ್ಯರು ಮತ್ತು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನಿರ್ದೇಶನದಲ್ಲಿ ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷ ಕಲಾ ವೇದಿಕೆಯ ಕಲಾವಿದರು ನಳ ದಮಯಂತಿ ಯಕ್ಷಗಾನ ಪ್ರದರ್ಶಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.