Skip to main content

ಉದ್ಯಾವರ : ನೃತ್ಯ ಪ್ರದರ್ಶನದ ವಿಶ್ವದಾಖಲೆ ಸಾಧಿಸಿದ ರೆಮೊನಾ ಎವೆಟ್ ಪಿರೇರಾಗೆ ಸನ್ಮಾನ.

By August 7, 2025Kannada News
kallianpurdotcom: Mob 9741001849
( ವರದಿ : ಸ್ಟೀವನ್ ಕುಲಾಸೋ ಉದ್ಯಾವರ ) 

ಉಡುಪಿ: 170 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ಬರೆದ ರೆಮೊನಾ ಎವೆಟ್ ಪಿರೇರಾರನ್ನು ಮಂಗಳವಾರ ಉದ್ಯಾವರದ ಸoತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಸಭಾಂಗಣದಲ್ಲಿ ನಡೆದ ವಿಜೃಂಭಿತ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನಿರಂತರ್ ಉದ್ಯಾವರ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿ ರೆಮೋನಾಗೆ ಅಭಿನಂದನೆ ಸಲ್ಲಿಸಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರೆಮೋನಾ “170 ಗಂಟೆಗಳ ವಿಶ್ವದಾಖಲೆ ನನ್ನ ಕಾಲೇಜಾದ ಸೆಂಟ್ ಅಲೋಶಿಯಸ್ ನೀಡಿದ ನಿಶ್ಯಬ್ದ ಬೆಂಬಲವಿಲ್ಲದೇ ಸಾಧ್ಯವಿರುತ್ತಿರಲಿಲ್ಲ. ಅವರು ನನ್ನ ಹಿಂದೆ ಸದಾ ನಿಂತಿದ್ದರು. ಇದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ನನ್ನ ಗುರುವಿಗೆ ನಾನು ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಹೆಮ್ಮೆಪಡುವ ಲಿಯೋ ಸದಸ್ಯೆ ಆಗಿರುವೆ. ತುಳುನಾಡು ನಾಡಿನ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ಜನರು ನನಗೆ ಬೆಂಬಲ ನೀಡಿದ್ದು ಕೇವಲ ಕರ್ತವ್ಯದ ಅರಿವಿನಿಂದಲ್ಲ – ಅವರು ಕಲೆಯ ಬಗ್ಗೆ ಇರುವ ಪ್ರೀತಿ ಮತ್ತು ಬದ್ಧತೆಯಿಂದ ನನ್ನನ್ನು ನೋಡಲು ಬಂದಿದ್ದರು. ಇದು ನನಗೆ ಅನೇಕ ಅರ್ಥಗಳನ್ನೇ ನೀಡುತ್ತದೆ.” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ  “ರೆಮೋನಾ ಮೂರನೇ ವಯಸ್ಸಿನಲ್ಲಿ ನೃತ್ಯ ಅಭ್ಯಾಸ ಆರಂಭಿಸಿದರು. ಅವರ ಪರಿಶ್ರಮದಿಂದ ಇವತ್ತಿನ ಸಾಧನೆ ಸಾಧ್ಯವಾಗಿದೆ. ದೇವರು ಎಲ್ಲರಿಗೂ ಪ್ರತಿಭೆ ನೀಡಿದ್ದಾನೆ. ಆದರೆ ಅದನ್ನು ಗುರುತಿಸಿ ಬೆಳೆಸುವುದು ಕೆಲವು ಜನರಿಗೆ ಮಾತ್ರ ಸಾಧ್ಯ. ನೃತ್ಯವನ್ನು 170 ಗಂಟೆಗಳ ಕಾಲ ನಿರಂತರವಾಗಿ ಮಾಡುವುದು ಅಸಾಧ್ಯ ಎನಿಸಿಕೊಂಡಾಗ, ಅವರು ಅದನ್ನು ಸಾಧ್ಯವನ್ನಾಗಿ ಮಾಡಿದ್ದಾರೆ. ನಮಗೆ ಅವರ ಬಗ್ಗೆ ತುಂಬಾ ಹೆಮ್ಮೆ.” ಎಂದರು.

ಸೆಂಟ್ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರೆತ್ ಮಾತನಾಡಿ “ರೆಮೋನಾ ಕೇವಲ ಪ್ರತಿಭಾವಂತಳಲ್ಲ – ಅವರು ತಮ್ಮ ಪ್ರತಿಭೆಯನ್ನು ವಿಶ್ವದ ಮುಂದೆ ತೋರಿಸಲು ಧೈರ್ಯವಿರುವ ವ್ಯಕ್ತಿ. 170 ಗಂಟೆಗಳ ನೃತ್ಯ ಪ್ರದರ್ಶನ ಮಾಡುವುದು ಧೈರ್ಯ ಮತ್ತು ದೃಢ ಇಚ್ಛಾಶಕ್ತಿಯ ಸಂಕೇತ. ಸೆಂಟ್ ಅಲೋಶಿಯಸ್ ಇತಿಹಾಸದಲ್ಲಿ ಮೊದಲ ಬಾರಿಗೆ 6,000 ವಿದ್ಯಾರ್ಥಿಗಳು ಒಟ್ಟಾಗಿ ಒಬ್ಬ ವಿದ್ಯಾರ್ಥಿನಿಯ ಸಾಧನೆಗೆ ಶ್ಲಾಘನೆ ಸಲ್ಲಿಸಿದ್ದಾರೆ. ಇಂದು ಅವರು ಸೊಶಿಯಲ್ ಮೀಡಿಯಾದಲ್ಲಿಯೂ ಲಕ್ಷಾಂತರ ಜನರಿಗೆ ಪ್ರೇರಣೆ.” ಎಂದರು.

ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಧರ್ಮಗುರು ವಂ|ಅನಿಲ್ ಡಿಸೋಜಾ ಮಾತನಾಡಿ  “ರೆಮೋನಾ ಅವರಂತಹ ಪ್ರತಿಭೆಗಳು ನಮ್ಮ ಸಮಾಜವನ್ನು ಬೆಳಗಿಸುತ್ತವೆ. ಇಂತಹ ಸಾಧನೆಯು ಇತರರಿಗೂ ಸ್ಪೂರ್ತಿ.” ಎಂದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾತನಾಡಿ “ಒಬ್ಬ ನೃತ್ಯಗಾರ್ತಿ ದೊಡ್ಡ ಸಾಧನೆ ಮಾಡಬೇಕಾದರೆ, ಭಕ್ತಿ, ಶಿಸ್ತು, ನಿಷ್ಠೆ, ದೃಢತೆ ಮತ್ತು ಧೈರ್ಯ ಬೇಕು. ರೆಮೋನಾ ಅವರಲ್ಲಿ ಈ ಎಲ್ಲ ಗುಣಗಳಿವೆ. ಅವರ 170 ಗಂಟೆಗಳ ಪ್ರದರ್ಶನ ಇದಕ್ಕೆ ಸಾಕ್ಷಿ.” ಎಂದರು. ಲಯನ್ಸ್ ಗವರ್ನರ್ ಸಪ್ನಾ ಸುರೇಶ್ ಉಡುಪಿ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ರೆಮೋನಾಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಸಂಚಾಲಕ ಸ್ಟೀವನ್ ಕುಲಾಸೊ ಸ್ವಾಗತಿಸಿ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಜೆರಾಲ್ಡ್ ಪಿರೇರಾ ವಂದಿಸಿದರು. ಶಿಕ್ಷಕ ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕಥೊಲಿಕ್ ಸಭಾ ಅಧ್ಯಕ್ಷ  ರೊನಾಲ್ಡ್ ಆಲ್ಮೇಡಾ, ರಾಷ್ಟ್ರೀಯ ಮಹಿಳಾ ಬಿಲ್ಲವ ಸಂಘ ಅಧ್ಯಕ್ಷರಾದ ಗೀತಾಂಜಲಿ ಸುವರ್ಣ, ಉದ್ಯಮಿ ವಿಲ್ಸನ್ ಫೆರ್ನಾಂಡಿಸ್, ಡಾ. ಶೇಖ್ ವಹೀದ್, ತುಳು ಅಕಾಡೆಮಿ ಸದಸ್ಯರಾದ ನಾಗೇಶ್ ಕುಮಾರ್ ಉದ್ಯಾವರ, ಉದ್ಯಾವರೈಟ್ಸ್ ದುಬಾಯಿ ಕಾರ್ಯದರ್ಶಿ ರಾಯನ್ ಸುವಾರಿಸ್, ಐಸಿವೈಎಂ ಉಡುಪಿ ವಲಯ ಅಧ್ಯಕ್ಷ ರೊವಿನ್ ಪಿರೇರಾ ಮತ್ತು ನಿರಂತರ ಉದ್ಯಾವರದ ಅಧ್ಯಕ್ಷ ರೋಷನ್ ಕ್ರಾಸ್ಟೊ ಉಪಸ್ಥಿತರಿದ್ದರು.

 

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.