
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.೩೦: ಕಳೆದ ಒಂದು ವರ್ಷದಲ್ಲಿ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಪ್ರವಾಸ, ಕ್ರೀಡಾ ಮಹೋತ್ಸವ ಮುಂತಾದ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ಬಿ.ಎಸ್.ಕೆ.ಬಿ. ಎಸೋಸಿಯೇಶನ್ ತನ್ನ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಕಳೆದ ರವಿವಾರ (ಡಿ. ೨೮) ಕಿಂಗ್ಸ್ ಸರ್ಕಲ್ ನಲ್ಲಿರುವ ಷಣ್ಮುಖಾನಂದ ಸಭಾಗೃಹದಲ್ಲಿ ಎಸೋಸಿಯೇಶನ್‌ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಸೇರಿದಂತೆ ಪದಾಧಿಕಾರಿಗಳು ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭಗೈದರು.
ಉಪಾಧ್ಯಕ್ಷರಾದ ವೈ. ಮೋಹನ್ರಾಜ್ ನೇತೃತ್ವದಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ, ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಕಾರ್ಯ ನಿರ್ವಹಿಸಿ, ತನ್ನ ಜನ್ಮಭೂಮಿ ಹಾಗೂ ಕರ್ಮಭೂಮಿಯಲ್ಲಿ ಅಪಾರ ಜನಮನ್ನಣೆಯನ್ನು ಗಳಿಸಿದ,ಜೀರ್ಣಾವಸ್ಥೆಯಲ್ಲಿದ್ದ ಗೋಕುಲದ ಪುನರ್ ನಿರ್ಮಾಣ ಅಸಾಧ್ಯವೆಂದೇ ಭಾವಿಸಿದ ಸಮಯದಲ್ಲಿ ಭಗೀರಥ ಪ್ರಯತ್ನದಿಂದ ಏಳು ಅಂತಸ್ತಿನ ಗೋಕುಲ ಕಟ್ಟಡ, ಹಾಗೂ ಕಾಷ್ಠ,ಶಿಲ್ಪ ವೈಭವದಿಂದ ರಾರಾಜಿಸುವ ಶ್ರೀ ಗೋಪಾಲ ಕೃಷ್ಣ ದೇವಾಲಯವನ್ನು ಸಂಘದ ಸದಸ್ಯರ ಹಾಗೂ ಭಕ್ತಾದಿಗಳ ಸಹಕಾರದಿಂದ ನಿರ್ಮಿಸಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಸಾಧನೆಯ ಸರದಾರ ಬಿರುದಾಂಕಿತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಕೊಡುಗೈ ದಾನಿ, ಬಿ.ಎಸ್,ಕೆ,ಬಿ. ಎಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಅವರ ಬಹು ಮುಖ ವ್ಯಕ್ತಿತ್ವ, ಸಂಘಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ, ಸಂಜೀವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಲ್ಪಡುವ ಅತ್ಯುನ್ನತ ಗೋಕುಲ ರತ್ನ ಪ್ರಶಸ್ತಿಯನ್ನು ಉಪಾಧ್ಯಕ್ಷರು, ಗೌ. ಕಾರ್ಯದರ್ಶಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ, ಧಾರ್ಮಿಕ ಸಮಿತಿ ಸದಸ್ಯರೊಂದಿಗೆ ಡಾ| ಸುರೇಶ್ ಎಸ್ ರಾವ್ ಮತ್ತು ವಿಜಯಲಕ್ಷ್ಮಿ ಎಸ್.ರಾವ್ ದಂಪತಿ ಅವರಿಗೆ ಪೇಟ ತೊಡಿಸಿ, ಶಾಲು ಹೊದಿಸಿ, ಪುಷ್ಪಗುಚ್ಛ, ಸನ್ಮಾನ ಪತ್ರ ಹಾಗೂ ಉಡುಗೊರೆಗಳೊಂದಿಗೆ ಪ್ರದಾನ ಮಾಡಿದರು. ಅಂತೆಯೇ ಅವರ ಅವರಿಗೂ ಶಾಲು ಹೊದಿಸಿ ಉಡುಗೊರೆಗಳನ್ನಿತ್ತು ಗೌರವಿಸಿದರು.
ಸನ್ಮಾನಕ್ಕೆ ಉತ್ತರಿಸಿದ ಡಾ| ಸುರೇಶ್ ರಾವ್ ತನ್ನ ಅಧ್ಯಕ್ಷತೆಯ ಕಾಲದಲ್ಲಿ ಬೆಂಬಲವಾಗಿ ನಿಂತ ಪದಾಧಿಕಾರಿಗಳಿಗೆ, ಕಾರ್ಯಕಾರೀ ಸಮಿತಿಯವರಿಗೆ ಮನಃಪೂರ್ವಕ ಧನ್ಯವಾದ ಸಮರ್ಪಿಸಿದರು. ಅಲ್ಲದೆ ಗೋಕುಲ ಪುನರ್ ನಿರ್ಮಾಣ ಕಾರ್ಯದಲ್ಲಿ ತನಗೆ ಬೆಂಬಲವಾಗಿ ನಿಂತ ಮಾಜಿ ಉಪಾಧ್ಯಕ್ಷ ವಾಮನ್ ಹೊಳ್ಳ, ಮಾಜಿ ಕೋಶಾಧಿಕಾರಿ ಹರಿದಾಸ್ ಭಟ್, ಗೌ| ಕಾರ್ಯದರ್ಶಿ ಅನಂತ ಪದ್ಮನಾಭ ಪೋತಿ, ಶತಮಾನದ ಸ್ಮರಣಿಕಾ ಪುಸ್ತಕಗಳಿಗೆ ಸಹಕರಿಸಿದ ಜಗದೀಶ್ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಹಕರಿಸಿದ ಸುಧಾಕರ ಆಚಾರ್ಯ ರವರನ್ನು ಶಾಲು ಹೊದಿಸಿ ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಇಂಡಿಯನ್ ಐಡಲ್ ನ ಉದಯೋನ್ಮುಖ ಗಾಯಕ ಗಾಯಕಿಯರಾದ, ಚೈತನ್ಯ ದೇವಡೆ, ರಿಷಿ ಸಿಂಗ್, ಷಣ್ಮುಖಪ್ರಿಯ ಮತ್ತು ಮಾನಸಿ ಘೋಷ್ ಅವರಿಂದ ಪ್ರಸ್ತುತಗೊಂಡ ಬಾಲಿವುಡ್ ಬೀಟ್ಸ್, ಚಿತ್ರ ಗೀತೆಗಳ ರಸ ಮಂಜರಿ ಸಭಾ ಗೃಹದಲ್ಲಿ ನೆರೆದ ಅಪಾರ ವೀಕ್ಷಕರ ಮನ ರಂಜಿಸಿತು.
ಸಂಘದ ಉಪಾಧ್ಯಕ್ಷೆ ಚಿತ್ರಾ ಮೇಲ್ಮನೆ ಸ್ವಾಗತಿಸಿ, ಗೋಕುಲ ನೂರು ವರ್ಷಗಳಲ್ಲಿ ನಡೆದು ಬಂದ ದಾರಿ ಹಾಗೂ ಒಂದು ವರ್ಷದಲ್ಲಿ ಸಂಸ್ಥೆಯ ವತಿಯಿಂದ ಜರಗಿದ ಅನೇಕ ವಿಧದ ಕಾರ್ಯಕ್ರಮಗಳನ್ನು ವಿಸ್ತಾರವಾಗಿ ತಿಳಿಸುತ್ತಾ ಕಾರ್ಯಕ್ರಮ ನಿರೂಪಣೆಗೈದರು. ಜಗದೀಶ್ ಆಚಾರ್ಯ ಸನ್ಮಾನ ಪತ್ರ ವಾಚಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಗೌ| ಕಾರ್ಯದರ್ಶಿ ಎ. ಪಿ.ಕೆ.ಪೋತಿ ಧನ್ಯವಾದ ಸಮರ್ಪಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.