Skip to main content

ಪೇಜಾವರ ಮಠದಲ್ಲಿ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ರಾಮ ತೋರಿದ ಮಾತೃಭೂಮಿ ಪ್ರೀತಿಸಿ ಜೀವನ ಪಾವನಗೊಳಿಸಿ.

By February 2, 2026Kannada News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಫೆ.೦೧: ಆಸ್ತಿಕರು ಅನಿಸಿಕೊಂಡ ನಾವೆಲ್ಲಾ ಸಮಾಜಮುಖಿ ಸೇವೆಗಳ ಮೂಲಕ ಅವಶ್ಯವಾಗಿ ಮಾಡಬೇಕಾದ ಕರ್ತವ್ಯಗಳು ಮಾಡಬೇಕಾಗಿದೆ. ನಾವು ಸೇವೆಯನ್ನು ಅವಶ್ಯವಾಗಿ ಮಾಡಬೇಕು. ದೇಶದ ಪ್ರಜೆ ದೇಶಕ್ಕೆ ತೆರಿಗೆ ಕಟ್ಟುವುದು ಐಚ್ಫಿಕ ಕೊಡುಗೆಯಾಗಿರಿಸದೆ ಕಡ್ಡಾಯ ಮತ್ತು ಎಷ್ಟು ಅನಿವಾರ್ಯವೋ ಅಂದುಕೊಳ್ಳುತ್ತೇವೆಯೋ, ಅದರಂತೆ ಭಗವಂತನ ಸರ್ಕಾರದಲ್ಲಿರುವ ನಾವು ದೇವರ ಸರ್ಕಾರಕ್ಕೊಂದು ತೆರಿಗೆ ಕೊಡಬೇಕು ಅನ್ನುವುದೂ ಕರ್ತವ್ಯವಾಗಿಸಬೇಕು. ಆಧ್ಯಾತ್ಮಿಕ ಸೇವೆ ಮತ್ತು ಸಾಮಾಜಿಕ ಸಾಧನಾ ಸೇವೆಗಳು ಬೇರೆಬೇರೆಯಲ್ಲ. ಈ ಮಣ್ಣು, ನೆಲ ಮಾತ್ರವೇ ಜನ್ಮಭೂಮಿಯಲ್ಲ. ಬದಲಾಗಿ ಇಲ್ಲಿನ ಜನ, ನಡೆ, ನುಡಿ, ಸಂಸ್ಕಾರ, ಭಾಷೆ, ಸಂಸ್ಕೃತಿ, ಆಚಾರ ವಿಚಾರ ಇತ್ಯಾದಿಗಳೆಲ್ಲವೂ ಕೂಡಾ  ಮಾತೃಭೂಮಿಯಾಗಿದೆ. ನಮ್ಮ ದೇಶದ ಮೇಲೆ ನಮ್ಮ ಕೊಡುಗೆ ಗೌರವ ಭಕ್ತಿ ಇರಬೇಕು. ಹಾಗಾಗಿ ರಾಮಭಕ್ತಿ ಬೇರೆಯಲ್ಲ. ದೇಶಭಕ್ತಿ ಬೇರೆಯಲ್ಲ. ದೇಶಸೇವೆ ಬೇರೆಯಲ್ಲ. ರಾಮಸೇವೆ ಬೇರೆಯಲ್ಲ. ರಾಮನ ಸೇವೆ ಮಾಡಬೇಕಾದರೆ ರಾಮ ತೋರಿದ ಈ ಮಾತೃಭೂಮಿಯನ್ನು ಪ್ರೀತಿಸಿ ಸಮಾಜಮುಖಿಯಾಗಿ ಬಾಳಬೇಕು. ಇವೆಲ್ಲವೂ ಶ್ರೀರಾಮ ದೇವರಿಗೆ ಸಲ್ಲುವ  ಸೇವೆಯಾಗ ಲಿದೆ. ಪೇಜಾವರ ಮಠವು ಸಮಾಜಮುಖಿ ಮತ್ತು ಆಧ್ಯಾತ್ಮಿಕ ಪರವಾಗಿ ಸೇವಾ ನಿರತವಾಗಿದ್ದು, ಭಕ್ತರು ಸಾಧ್ಯವಾದ ಸೇವೆಯಿಂದ ಜೀವನ ಪಾವನಗೊಳಿಸಿರಿ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ಶ್ರೀ ೧೦೮ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ತಿಳಿಸಿದರು.

ಸಪ್ತಾಹದ ಮುಂಬಯಿ ಪ್ರವಾಸದಲ್ಲಿನ ವಿಶ್ವಪ್ರಸನ್ನ ಶ್ರೀಪಾದರು ಇಂದಿಲ್ಲಿ ಆದಿತ್ಯವಾರ ಉಡುಪಿ ಶ್ರೀಪೇಜಾವರ ಮಠದ ಮುಂಬಯಿ ಶಾಖೆಯ ಸಾಂತಾಕ್ರೂಜ್ ಪೂರ್ವದಲ್ಲಿನ ಮಧ್ವ ಭವನದ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ನಡೆಸಲಾಗಿದ್ದ ಧಾರ್ಮಿಕ ಪ್ರವಚನದಲ್ಲಿ ಅನುಗ್ರಹ ನುಡಿಗಳನ್ನಾಡಿ ನೆರೆದ ಸದ್ಭಕ್ತರನ್ನುದ್ದೇಶಿಸಿ ಹರಸಿದರು. ಕೃಷ್ಣೈಕ್ಯ ಗುರುಗಳಾದ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ ಅವರ ದೂರದೃಷ್ಠಿತ್ವದ ಧರ್ಮ ಸಂರಕ್ಷಣವೇ ನಮಗೆ ಪ್ರೇರಣೆಯಾಗಿದೆ. ಶ್ರೀಮಠದಿಂದ ಏನೆಲ್ಲಾ ಕಾರ್ಯ, ಯೋಜನೆಗಳು ನಡೆಯುತ್ತಿವೆ ಎಂಬುವುದನ್ನು ತಿಳಿಸಿ ನಾವೆಲ್ಲರೂ ಸೇವಾಮುಖಿಗಳಾಗಿ ಶ್ರೀ ವಿಶ್ವೇಶತೀರ್ಥರ ಜನ್ಮ ಶತಮಾನೋತ್ಸವಕ್ಕೆ ಇಂದಿನಿಂದಲೇ ಸಜ್ಜಾಗೋಣ ಎಂದ ಕರೆಯಿತ್ತರು.

ಪ್ರಾತಃಕಾಲ ಮುಂಬಯಿ ಮಠಕ್ಕಾಗಮಿಸಿದ ಸ್ವಾಜೀಜಿಯವರನ್ನು ಮಠದಲ್ಲಿನ ಪುರೋಹಿತ ವೃಂದವು ತುಳಸೀಹಾರವನ್ನಿತ್ತು ಸಾಂಪ್ರದಾಯಿಕ ವಾಗಿ ಬರಮಾಡಿಕೊಂಡರು. ಬಳಿಕ ಶ್ರೀಗಳು ಮಠದ ಶಿಲಾಮಯ ಮಂದಿರದ ಸನ್ನಿಧಾನದಲ್ಲಿ ಪ್ರತಿಷ್ಠಾತಿತ ಶ್ರೀಕೃಷ್ಣ ಮುಖ್ಯಪ್ರಾಣ ದೇವರಿಗೆ ಆರತಿಗೈದರು. ವಿದ್ವಾನ್ ರಾಘವೇಂದ್ರ ಭಟ್ ಉಂಡಾರು ನಿತ್ಯ ಪೂಜಾಧಿಗಳನ್ನು ನೆರವೇರಿಸಿದರು. ಶ್ರೀಪಾದರು ಪಟ್ಟದ ದೇವರು, ಶ್ರೀರಾಮನ ಪೂಜೆ, ಸಂಸ್ಥಾನಪೂಜೆ, ಪ್ರವಚನ ನೆರವೇರಿಸಿದರು.

ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ ಶ್ರೀಪಾದರಿಗೆ ಸಾಂಪ್ರದಾಯಿಕವಾಗಿ ಗೌರವಿಸಿದರು. ಶ್ಯಾಮಲಾ ಎ.ಶಾಸ್ತ್ರಿ ಸಾರಥ್ಯದಲ್ಲಿ ಮಠದ ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್ ಹಾಗೂ ಇನ್ನಿತರ ಭಜನಾ ಮಂಡಳಿಗಳು ಭಜನೆ ಗೈದರು.

ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗ ಮತ್ತು ಟಿ೨೦ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪತ್ನಿ ದೇವಿಶಾ ಶೆಟ್ಟಿ, ವೇ| ಮೂ| ಕೃಷ್ಣರಾಜ್ ತಂತ್ರಿ, ಸೂಡ ರಾಘವೇಂದ್ರ ಭಟ್ (ಮಲಾಡ್), ಡಾ| ಎಂ.ಎಸ್ ಆಳ್ವ, ಬಿಎಸ್‌ಕೆಬಿಎ ಮಾಜಿ ಉಪಾಧ್ಯಕ್ಷ ವಾಮನ್ ಹೊಳ್ಳಾ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ಥ ಸದಸ್ಯ ಬಿ.ರಮಾನಂದ ರಾವ್, ಚಂದ್ರಶೇಖರ್ ಭಟ್, ಎಸ್.ರಾಮವಿಟ್ಟಲ ಕಲ್ಲೂರಾಯ, ರಾಘವೇಂದ್ರ ಭಟ್, ಸೀತಾರಾಮ ಶೆಟ್ಟಿ ವಾಮಂಜೂರು, ಪದ್ಮಜಾ ಮಣ್ಣೂರು, ಶೇಖರ್ ಜೆ.ಸಾಲ್ಯಾನ್, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಪದಾಧಿಕಾರಿಗಳು, ವಿಶ್ವಸ್ಥರು, ಸದಸ್ಯರುಗಳು, ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮುಂಬಯಿ ಅಂಗ ಸಂಸ್ಥೆಯ ಪದಾಧಿಕಾರಿಗಳು, ಶ್ರೀ ಪೇಜಾವರ ಮಠ ಮುಂಬಯಿ ಇದರ ಪ್ರಬಂಧಕರಾದ ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಸೇರಿದಂತೆ ಮಠದಲ್ಲಿನ ಪುರೋಹಿತರು, ಮಹಿಳಾವೃಂದ ಸೇರಿದಂತೆ ಭಕ್ತರನೇಕರು ಉಪಸ್ಥಿತರಿದ್ದು, ಸ್ವಾಮೀಜಿ ಅವರು ದಾನಿಗಳು ಮತ್ತು ಭಕ್ತರಿಗೆ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಹರಸಿದರು.

ಪುರೋಹಿತರ ವೇದಘೋಷಣೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಂಬಯಿ ಶಾಖಾ ಪ್ರಧಾನ ಆಡಳಿತಾಧಿಕಾರಿ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಗತಿಸಿ ಪ್ರಸ್ತಾವನೆಗೈದರು. ಟ್ರಸ್ಟಿ ಹರಿದಾಸ್ ಭಟ್ ಮಠದ ಯೋಜನೆಗಳ ವಿವರವನ್ನಿತ್ತರು. ಮುಖ್ಯ ಕಾರ್ಯನಿರ್ವಣಾ ಅಧಿಕಾರಿ ಡಾ| ಚಾಂದಿಲ್ ಕುಮಾರ್ ಎಸ್‌ವಿಎಂ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನಿತ್ತರು. ಸಿಎ| ಶಿವ ಸದಂತ್ರಿ ಶಿಕ್ಷಣ ಸಂಸ್ಥೆಗಳ ಸ್ಥಾಲವಾದ ವಿವರಗಳನ್ನಿತ್ತರು. ವಾಸುದೇವ ಭಟ್ ಬೆಂಗಳೂರು ಕಾರ್ಯಕ್ರಮ ನಿರೂಪಿಸಿ ಕೃತಜ್ಞತೆ ಸಮರ್ಪಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.