
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.01: ಪತ್ರಿಕಾವೃತ್ತಿ ವ್ಯಕ್ತಿತ್ವದ ಮೌಲ್ಯ ಮತ್ತು ಘನತೆ ಸಂಪಾದಿಸುತ್ತದೆ. ಆದ್ದರಿಂದ ಪತ್ರಕರ್ತರು ಪರ ವಿರುದ್ಧ ಮರೆತು ಸತ್ಯತೆಯ ಸಮಚಿತ್ತರಾಗಿ ಸೇವಾ ನಿರತರಾಗಬೇಕು. ಅದೇ ಪತ್ರಿಕಾವೃತ್ತಿ ಧರ್ಮವಾಗಿದೆ. ರಾಷ್ಟ್ರದ ಉದ್ದಗಲಕ್ಕೂ ಕೆಯುಡಬ್ಲೂ ಜೆ ಪಸರಿಸುವ ಆಶಯ ನಮ್ಮದಾಗಿದ್ದು ಇದರಿಂದ ಪತ್ರಕರ್ತರ ಬದುಕಿಗೆ ಆಸರೆಯಾಗುವ ಉದ್ದೇಶ ಹೊಂದಿದ್ದೇವೆ. ಈ ಮೂಲಕ ಪತ್ರಕರ್ತ ರಲ್ಲಿನ ಸಂಬಂಧಗಳು ಅನ್ಯೋನ್ಯವಾಗಿ ಬೆಳೆದು ಸಾಂಘಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಇಂದಿಲ್ಲಿ ರವಿವಾರ ಮುಂಬಯಿ ಅಂಧೇರಿ ಪೂರ್ವದ ಕ್ಲಬ್ ಹೌಸ್ನ ಸಭಾಗೃಹದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಮಹಾರಾಷ್ಟ್ರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ತಗಡೂರು ಮಾತನಾಡಿದರು.
ಕೆಯುಡಬ್ಲ್ಯೂಜೆ ಮಹಾರಾಷ್ಟ್ರ-೨೦೨೬ನೇ ಸಾಲಿನ ಡೈಯರಿ ಬಿಡುಗಡೆ ಗೊಳಿಸಿ, ಕೆಯುಡಬ್ಲೂ ಜೆ ಮಹಾರಾಷ್ಟ್ರ ರಾಜ್ಯ ಘಟಕದ ನೂತನ ಪದಾಧಿಕಾರಿಗಳಿಗೆ ಆಯ್ಕೆಪತ್ರ ಪ್ರದಾನಿಸಿ ಗೌರವಿಸಿ ಅಭಿನಂದಿಸಿ ಮಹಾರಾಷ್ಟ್ರ ಘಟಕದ ರಾಜ್ಯಧ್ಯಕ್ಷ ಆಗಿ ಆಯ್ಕೆಯಾದ ಡಾ| ಶಿವ ಮೂಡಿಗೆರೆ ಹಾಗೂ ಗೌರವ ಕೋಶಾಧಿಕಾರಿ ಸದರಾಮ ಎನ್.ಶೆಟ್ಟಿ ಸಂಪದಮನೆ ಇವರಿಗೆ ಸಾಂಕೆತಿಕವಾಗಿ ಗುರುತುಪತ್ರ ವಿತರಿಸಿ ಅಧಿಕಾರ ಹಸ್ತಾಂತರಿಸಿ ಶುಭಾರೈಸಿ ಮಾತನಾಡಿದ ತಗಡೂರು, ಬದುಕಿನ ಕಾಲಘಟ್ಟದಲ್ಲಿ ನಾವು ಎಷ್ಟು ದಿನ ಬದುಕಿರುತ್ತೇವೆಯೋ ಅಷ್ಟು ದಿನ ನಾವು ಎಷ್ಟು ಜನರ ಮನಸ್ಸನ್ನ ಗೆಲ್ಲುವುದು ಮುಖ್ಯವಾಗಿಸಿ. ಅಷ್ಟೇ ಜನರ ಹೃದಯಗಳನ್ನು ತಲುಪಿ ವಸ್ತುನಿಷ್ಠರಾಗಿ ಸಾಧ್ಯವಾದಷ್ಟು ಜನರ ಕಣ್ಣೀರು ಒರೆಸಿ ಅದನ್ನೇ ಜೀವನವಾಗಿಸಿರಿ. ದೇವರು ನಮಗೆ ಕೊಟ್ಟ ಪತ್ರಕರ್ತನ ಸೌಭಾಗ್ಯವನ್ನು ಈ ಮೂಲಕ ಸಂತೋಷವಾಗಿಸಿ ಧನ್ಯತಾ ಬಾಳನ್ನು ತಮ್ಮದಾಗಿಸಿರಿ ಎಂದರು.
ಕೆಯುಡಬ್ಲೂ ಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ, ಮಹಾರಾಷ್ಟ್ರ ಘಟಕದ ಚುನಾವಣಾ ಅಧಿಕಾರಿ ಸಿಎ| ಜಗದೀಶ್ ಬಿ.ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ ಅಧ್ಯಕ್ಷೆ ಡಾ| ಜಿ.ಪಿ ಕುಸುಮ, ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಸ್ಥಾಪಕ ಅಧ್ಯಕ್ಷ ರೋನ್ಸ್ ಬಂಟ್ವಾಳ್ ವೇದಿಕೆಯಲ್ಲಿದ್ದು, ಇದೇ ಮಾರ್ಚ್ ಕೊನೆಯಲ್ಲಿ ಬೀದರ್ನಲ್ಲಿ ಜರಗುವ ಕೆಯುಡಬ್ಲ್ಯೂಜೆ ರಾಜ್ಯ ಸಮ್ಮೇಳನದಲ್ಲಿ ಮಹಾರಾಷ್ಟ್ರದಲ್ಲಿನ ಪತ್ರಕರ್ತರು ಅತ್ಯಾಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತಗಡೂರು ಆಹ್ವಾನಿಸಿದರು.
ಜಿ.ಸಿ ಲೋಕೇಶ ಮಾತನಾಡಿ ಶತಮಾನದತ್ತ ದಾಪುಗಾಲು ಇರಿಸುವ ಕೆಯುಡಬ್ಲ್ಯೂಜೆ ಪ್ರಸ್ತುತ ರಾಷ್ಟ್ರದಾದ್ಯಂತದ ಪತ್ರಕರ್ತರ ಶಕ್ತಿಯಾಗಿ ಬೆಳೆಯುತ್ತಿದೆ. ಪತ್ರಕರ್ತರ ವೃತ್ತಿನಿವೃತ್ತಿ ಬಳಿಕ ನಮ್ಮನ್ನು ಕೇಳುವವರು ಯಾರೂ ಇಲ್ಲ ಎಂದು ಕಾಡುವ ಪ್ರೆಶ್ನೆಗೆ ಕೆಯುಡಬ್ಲ್ಯೂಜೆ ಉತ್ತರವಾಗಿಸುತ್ತಿದೆ. ಆದ್ದರಿಂದ ಪತ್ರಕರ್ತರಲ್ಲಿ ಸಾಂಘಿಕತೆ ಇನ್ನಷ್ಟು ವೃದ್ಧಿಯಾಗಬೇಕು. ಆವಾಗಲೇ ಸರಕಾರಗಳೂ, ಸಮಾಜವೂ ನಮ್ಮ ಪರವಿದ್ದು ಸಹಕರಿಸುತ್ತವೆ ಎಂದರು.
ಕೆಯುಡಬ್ಲ್ಯೂಜೆ ಮಹಾರಾಷ್ಟ್ರ ಘಟಕದ ಸ್ಥಾಪನೆ ಒಂದು ದೊಡ್ಡ ಸಾಧನೆಯಾಗಿದೆ. ಇದು ಅನೇಕ ವರ್ಷಗಳ ಕನಸು ಇದೀಗ ನನಸಾಗಿ ದಂತಿದೆ. ಪತ್ರಕರ್ತರನ್ನು ಒಗ್ಗೂಡಿಸುವ ಕೆಲಸ ಅಸಾಮಾನ್ಯವಾಗಿದ್ದು, ಮಹಾರಾಷ್ಟ್ರದಲ್ಲಿ ಕನ್ನಡಿಗ ಪತ್ರಕರ್ತರ ಐಕ್ಯತೆ ಸಾರ್ಥಕತೆಯ ಸಂದೇಶವಾಗಿದೆ. ಅದರಲ್ಲೂ ಮುಂಬಯಿಯಲ್ಲಿನ ಮಹಿಳಾ ಪತ್ರಕರ್ತೆಯರ ಸಕ್ರೀಯತೆ ಶ್ರೇಷ್ಠವಾಗಿದೆ ಎಂದ ಸಿಎ| ಜಗದೀಶ್ ತಿಳಿಸಿದರು.
ಜಿ.ಪಿ ಕುಸುಮ ಮಾತನಾಡಿ ಪತ್ರಕರ್ತರ ಈ ಡೈಯರಿ ಕೇವಲ ದಿನಗಳನ್ನು ನೋಡುವ ಕೈಪಿಡಿಯಲ್ಲ. ಬದಲಾಗಿ ಪತ್ರಿಕೋದ್ಯಮದ ಸಂಬಂಧ ವನ್ನು ಬಲಪಡಿಸುವ ದಿನಚರಿ ಪುಸ್ತಕವಾಗಿದೆ. ಪತ್ರಕರ್ತರ ಒಗ್ಗಟ್ಟಿನ ಮತ್ತು ಅಸ್ಮಿತೆಯ ಸಂಕೇತವಾಗಿದೆ ಎಂದರು.
ಪತ್ರಕರ್ತರ ಅಭ್ಯುದಯದ ಕನಸುಹೊತ್ತ ಇಲ್ಲಿನ ಉಭಯ ಸಂಸ್ಥೆಗಳು ಪತ್ರಕರ್ತ ಪಾಲಿನ ಕಲ್ಪವೃಕ್ಷವಾಗಿವೆ. ನಾವು ಕಾರ್ಯನಿರತರು ಮಾತ್ರ ಪತ್ರಕರ್ತರು ಅನ್ನುವುದಕ್ಕಿಂತ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿನಿರತರನ್ನೂ ಪತ್ರಕರ್ತರರು ಅಂದುಕೊಂಡಾಗಷ್ಟೇ ಇಲ್ಲಿ ಪತ್ರಕರ್ತರ ಸಂಘಟನೆ ಗಳು ಬೆಳೆಯಲು ಸಾಧ್ಯವಾಗುವುದು. ಒಟ್ಟಾರೆ ವೃತ್ತಿನಿವೃತ್ತಿಯ ಬಳಿಕವೂ ನಮ್ಮ ಅಸ್ಮಿತೆಯನ್ನು ಉಳಿಸಿ ಶಾಸ್ವತವಾಗಿ ಪತ್ರಕರ್ತರಾಗಿ ಉಳಿದು ಬದುಕು ರೂಢಿಸಿಕೊಂಡು ಮನ್ನಡೆಯೋಣ ಅಧ್ಯಕ್ಷೀಯ ಭಾಷಣದಲ್ಲಿ ಶಿವ ಮೂಡಿಗೆರೆ ಕರೆಯಿತ್ತರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಂಗ ಎಸ್.ಪೂಜಾರಿ, ಸವಿತಾ ಎಸ್.ಶೆಟ್ಟಿ, ಹರೀಶ್ ಪೂಜಾರಿ ಕೊಕ್ಕರ್ಣೆ, ಜೋನ್ ವಿಲ್ಸನ್ ಲೋಬೋ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಅಧಿಕಾರ ಸ್ವೀಕರಿಸಿದ್ದು ಸೂಕ್ತ ನ್ಯೂಸ್ ಸಂಸ್ಥೆಯ ಆಡಳಿತ ನಿರ್ದೇಶಕ ಜೋನ್ ವಿಲ್ಸನ್ ಲೋಬೋ, ಶರದ್ಕುಮಾರ್ ಘಾಂಡ್ತೆ ಬೀದರ್, ಡೈರಿಯ ಪ್ರಕಾಶನಕ್ಕೆ ಶ್ರಮಿಸಿದ ಸಿದಾನಂದ ಡಿ.ಅಮ್ಮೆನರ್, ಸುರೇಶ್ ಕೆ.ಮೂಲ್ಯ ಮಂಚಕಲ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಸವಿತಾ ಎಸ್.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಡಾ| ಶಿವ ಮೂಡಿಗೆರೆ ಸ್ವಾಗತಿಸಿದರು. ರೋನ್ಸ್ ಬಂಟ್ವಾಳ್ ಪ್ರಾಸ್ತವನೆಗೈದರು. ಅನಿತಾ ಪೂಜಾರಿ ತಾಕೋಡೆ ಗಣ್ಯರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಶ್ಯಾಮ್ ಎಂ.ಹಂದೆ, ಗೋಪಾಲ ಪೂಜಾರಿ ತ್ರಾಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಡಾ| ದಿನೇಶ್ ಎನ್.ಶೆಟ್ಟಿ ರೆಂಜಾಳ ತನ್ನ ಅನಿಸಿಕೆಗಳನ್ನುವ್ಯಕ್ತಪಡಿಸಿ ಸಂಘದ ಮುನ್ನಡೆಗೆ ಯಶಕೋರಿ ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.