
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.೨೭: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ. ಎಸ್.ಕೆ.ಬಿ. ಎಸೋಸಿಯೇಶನ್ ಮತ್ತು ಗೋಕುಲ ಭಜನಾ ಮಂಡಳಿಯ ಸಹಯೋಗದೊಂದಿಗೆ ಗೋಕುಲ ಸಭಾಗೃಹದಲ್ಲಿ ಆಷಾಢ ಏಕಾದಶಿ ದೇವಶಯನಿ ಏಕಾದಶಿ ಪರ್ವ ದಿನವನ್ನು ಕಳೆದ ಶನಿವಾರ (ಜು.೨೫) ರಂದು ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ ಮತ್ತು ಗೋಕುಲ ಭಜನಾ ಮಂಡಳಿಯ ಆಯೋಜನೆಯಲ್ಲಿ ಪ್ರಾತಃಕಾಲ ೮ ಗಂಟೆಯಿಂದ ರಾತ್ರಿ ೮ ಗಂಟೆಯ ವರೆಗೆ ಹರಿನಾಮ ಸಂಕೀರ್ತನೆಗಳೊಂದಿಗೆ ಅತ್ಯಂತ ಸಂಭ್ರಮದಿಂದ ಆಚರಿಸಿತು.
ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು ವಿಶೇಷ ತುಳಸಿ ಮಾಲೆ, ಪುಷ್ಪ ಹಾರಗಳಿಂದ ದೇವಾಲಯದ ಅರ್ಚಕ ವೇ. ಮೂ. ಗಣೇಶ್ ಭಟ್ ಅತ್ಯಂತ ಸುಂದರವಾಗಿ ಅಲಂಕರಿಸಿದ್ದರು. ಅಂತೆಯೇ ಸಭಾಗೃಹದಲ್ಲಿ ಅಲಂಕರಿಸಿದ ತುಳಸಿ ವೃಂದಾವನದ ಮಧ್ಯೆ ಶ್ರೀ ವಿಠಲ ರುಕುಮಾಯಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪುಷ್ಪ ಹಾರಗಳಿಂದ ಶೃಂಗರಿಸಿ, ದೇವಾಲಯದಲ್ಲಿ ಪ್ರಾತಃಕಾಲದ ನಿತ್ಯ ಪೂಜೆಯಾದ ನಂತರ ವೇ.ಮೂ. ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ಪ್ರಾರ್ಥನೆಯೊಂದಿಗೆ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ತರಾದ ಕೃಷ್ಣ ಆಚಾರ್ಯ, ಶೈಲಿನಿ ರಾವ್, ಬಿ.ಎಸ್.ಕೆ.ಬಿ. ಅಸೋಸಿಯೇಷನ್ ಉಪಾಧ್ಯಕ್ಷೆ ಚಿತ್ರಾ ಮೇಲ್ಮನೆ ಗೌ.ಕಾರ್ಯದರ್ಶಿ ಅನಂತ ಪದ್ಮನಾಭ ಪೋತಿ, ಜೊತೆ ಕಾರ್ಯದರ್ಶಿ ವಿನೋದಿನಿ ರಾವ್, ಗೋಕುಲ ಭಜನಾ ಮಂಡಳಿಯ ಅಧ್ಯಕ್ಷೆ ಪ್ರೇಮಾ ರಾವ್, ಸಂಚಾಲಕಿ ಸ್ಮಿತಾ ಭಟ್, ಡಾ| ಸಹನಾ ಪೋತಿ ಹಾಗೂ ಸದಸ್ಯರೊಂದಿಗೆ ದೀಪ ಪ್ರಜ್ವಲನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರ-ಪ್ರಥಮವಾಗಿ ಗೋಕುಲ ಭಜನಾ ಮಂಡಳಿ ಶ್ರೀ ಕೃಷ್ಣ ಭಜನಾ ಮಂಡಳಿಯೊಂದಿಗೆ ಹರಿನಾಮ ಸಂಕೀರ್ತನಾ ಸೇವೆ ಸಲ್ಲಿಸಿದ ನಂತರ, ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ, ಜರಿಮರಿ, ಏಕನಾಥೇಶ್ವರಿ ಭಜನಾ ಮಂಡಳಿ, ದಾದರ್, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಅಂಧೇರಿ, ಶ್ರೀ ವಿಠ್ಠಲ ಭಜನಾ ಮಂಡಳಿ, ಮೀರಾ ರೋಡ್, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿ, ನೇರೂಲ್, ಶ್ರೀ ಹರಿಕೃಷ್ಣ ಭಜನಾ ಮಂಡಳಿ, ನವಿ ಮುಂಬಯಿ, ಶ್ರೀ ಸ್ಕಂದ ಭಜನಾ ಮಂಡಳಿ, ಚೆಂಬೂರ್, ಶ್ರೀ ರಾಮ ಭಜನಾ ಮಂಡಳಿ, ನೇರೂಲ್, ಯುವ ಕಲಾವೃಂದ, ಗೋಕುಲ, ಹೀಗೆ ಹನ್ನೊಂದು ಭಜನಾ ಮಂಡಳಿಗಳ ೧೫೦ ಕ್ಕೂ ಮಿಕ್ಕಿ ಸದಸ್ಯರು ಪಾಲ್ಗೊಂಡು, ಅತ್ಯಂತ ಭಕ್ತಿಭಾವದಿಂದ ಸಂಕೀರ್ತನಾ ಸೇವೆ ಸಲ್ಲಿಸಿದರು.
ಡಾ| ಸುರೇಶ್ ಎಸ್ ರಾವ್, ಡಾ| ಅರುಣ್ ರಾವ್, ಬಿ.ರಮಾನಂದ ರಾವ್, ಮೋಹನ್ರಾಜ್, ಅವಿನಾಶ್ ಶಾಸ್ತ್ರೀ, ಪ್ರಶಾಂತ್ ಹೆರ್ಲೆ, ವಿಜಯ ಕುಮಾರ್ ಭಟ್, ಸದಾಶಿವ ರಾವ್, ಗುರುರಾಜ್ ಭಟ್, ಎಸ್. ಎನ್. ಉಡುಪ, ರಾಮಪ್ರಸಾದ್ ರಾವ್, ಪ್ರೇಮಾ ರಾವ್, ಲೀಲಾವತಿ ರಾವ್, ರೋಹಿಣಿ ಬಾಯಿರಿ, ಶಾಲಿನಿ ರಾವ್, ಯಶಸ್ವಿನಿ ಆಚಾರ್ಯ, ಪ್ರಿಯಾಂಜಲಿ ರಾವ್ ರವರು ಹರಿನಾಮ ಸಂಕೀರ್ತನೆಯ ಪ್ರಾಯೋಜಕರಾಗಿ ದ್ದರು. ಅಲ್ಲದೆ ಹಲವಾರು ಭಕ್ತಾದಿಗಳು ಹರಿನಾಮ ಸಂಕೀರ್ತನೆಗೆ ತಂತಮ್ಮ ದೇಣಿಗೆಯನ್ನು ನೀಡಿ ಸಹಕರಿಸಿದ್ದರು.
ಅಂದು ವಿಶೇಷವಾಗಿ ಆಯೋಜಿಸಿದ ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆಯು ವೇ. ಮೂ. ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ನೇತೃತ್ವದಲ್ಲಿ ಸೇವಾರ್ಥಿಗಳಿಗೆ ಶ್ರೀ ವಿಷ್ಣು ಸಹಸ್ರ ನಾಮ ತುಳಸಿ ಅರ್ಚನೆ ಸಾಮೂಹಿಕ ಸಂಕಲ್ಪ ನೆರವೇರಿತು. ಭಕ್ತಾದಿಗಳು ವಿಷ್ಣು ಸಹಸ್ರ ನಾಮ ಪಠಣೆಯೊಂದಿಗೆ ಶ್ರೀ ಕೃಷ್ಣನಿಗೆ ತುಳಸಿ ಅರ್ಚನೆ ಗೈದರು. ಅಂತೆಯೇ ವೇದಮೂರ್ತಿ ಗಣೇಶ್ ಭಟ್ ರವರು ಶ್ರೀ ಗೋಪಾಲಕೃಷ್ಣ ದೇವರಿಗೆ ವಿಷ್ಣು ಸಹಸ್ರನಾಮದೊಂದಿಗೆ ತುಳಸಿ ಅರ್ಚನೆ ಗೈದು ಮಹಾ ಪೂಜೆ ಮಹಾ ಮಂಗಳಾರತಿ ಬೆಳಗಿದರು. ಈ ವಿಶೇಷ ತುಳಸಿ ಅರ್ಚನೆಯಲ್ಲಿ ಅನೇಕ ಭಕ್ತಾದಿಗಳು ಪಾಲ್ಗೊಂಡರು. ಪ್ರತಿ ಏಕಾದಶಿಯಂತೆ ಸ್ಮಿತಾ ಭಟ್ ರವರ ನೇತೃತ್ವದಲ್ಲಿ ಭಗವದ್ಗೀತೆ ಪಠನೆ ನೆರವೇರಿತು.
ರಾತ್ರಿ ದೇವಾಲಯದಲ್ಲಿ ನಿತ್ಯ ಪೂಜೆಯಾದ ನಂತರ ಗೋಕುಲ ಭಜನಾ ಮಂಡಳಿಯಿಂದ ಭಜನಾ ಮಂಗಳ ನೆರವೇರಿದ ನಂತರ ವೇ.ಮೂ. ಗಣೇಶ್ ಭಟ್ ರವರು ಶ್ರೀ ವಿಠಲ ರುಕುಮಾಯಿ ದೇವರಿಗೆ ಮಂಗಳಾರತಿ ಬೆಳಗಿ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಅಂದು ಮುಂಜಾನೆಯಿಂದ ರಾತ್ರಿಯವರೆಗೆ ಸಾವಿರಾರು ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು ಅನುಗ್ರಹಿತರಾದರು. ಸ್ಥಳೀಯ ಎರಡು ಶಾಲೆಯ ನಾಲ್ಕು ನೂರಕ್ಕೂ ಮಿಕ್ಕಿ ಮಕ್ಕಳು ವಿಠಲ – ರುಕುಮಾಯಿ ಹಾಗೂ ಮಹಾರಾಷ್ಟ್ರ ಸಾಂಪ್ರದಾಯಕ ವೇಷ ಧರಿಸಿ, ಪಾಲಕರು, ಶಿಕ್ಷಕಿಯರೊಂದಿಗೆ ಪಾಲಕಿ ವೃಕ್ಷ ದಿಂಡಿಯ ಮೆರವಣಿಗೆಯೊಂದಿಗೆ ಗೋಕುಲಕ್ಕೆ ಆಗಮಿಸಿ ಶ್ರೀ ಗೋಪಾಲಕೃಷ್ಣನ ದರ್ಶನ ಗೈದು ಪ್ರಸಾದ ಸ್ವೀಕರಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.