
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಆ.೦೫: ಕಳೆದ ಎಂಟೂವರೆ ದಶಕಗಳಿಂದ ಸಮಾಜ ಸೇವೆ ಹಾಗೂ ಸ್ವಸಮುದಾಯದ ಹಿತಕ್ಕಾಗಿ ನೀಡುತ್ತಿರುವ ಸಂಘದ ನಿರಂತರ ಸೇವೆ ಅತ್ಯಂತ ಶ್ಲಾಘನೀಯ. ನಿಮ್ಮ ನಿಸ್ವಾರ್ಥ ಸೇವೆ, ದೂರದೃಷ್ಟಿ ಮತ್ತು ಸಮುದಾಯದ ಏಳಿಗೆಗಾಗಿ ತೋರಿದ ಬದ್ಧತೆ, ಕೊಡುಗೆ ಮತ್ತು ಮಾರ್ಗದರ್ಶನ ಸಂಘಕ್ಕೆ ಸದಾ ಸ್ಪೂರ್ತಿದಾಯಕವಾಗಿದೆ. ಮುಂಬರುವ ದಿನಗಳಲ್ಲೂ ನಿಮ್ಮ ಈ ಸೇವಾನಿಷ್ಠೆ ಹೀಗೆಯೇ ಮುಂದುವರಿದು, ಸಮುದಾಯವನ್ನು ಮತ್ತಷ್ಟು ಉನ್ನತ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸುತ್ತೇವೆ ಎಂದು ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್ ತಿಳಿಸಿದರು. ಬೃಹನ್ಮುಂಬಯಿ ಯಲ್ಲಿನ ಪ್ರತಿಷ್ಠಿತ ಸೇವಾ ಸಂಸ್ಥೆ ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ೮೭ನೇ ವಾರ್ಷಿಕ ಸರ್ವಸದಸ್ಯರ ಸಭೆಯು ಕಳೆದ ಗುರುವಾರ ಚೆಂಬೂರು ಚೆಢಾನಗರ್‌ನಲ್ಲಿರುವ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನೆರವೇರಿಸಿದ್ದು, ಕೆ.ಸುಬ್ಬಣ್ಣ ರಾವ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಪ್ರಭವ ನಾಮ ಸಂವತ್ಸರದ ಶುಭಾಶಯವನ್ನು ಕೋರಿ ಸಂಘದ ಗತ ವರ್ಷದ ಚಟುವಟಿಕೆಗಳ ವಿವರಣೆಗಳನ್ನಿತ್ತರು.
ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸ ಸಂಘದ ಮೂಲ ಉದ್ದೇಶವಾಗಿದ್ದು ೨೦೨೫-೨೬ನೇ ಸಾಲಿಗೆ ಸಂಘವು ರೂ. ೪,೨೯,೦೦೦/- ವಿದ್ಯಾರ್ಥಿ ವೇತನ, ರೂ.೪೦,೦೦೦/- ಪ್ರತಿಭಾವಂತ ಮಕ್ಕಳ ಪುರಸ್ಕಾರ, ರೂ.೬,೦೦,೦೦೦/- ಸಾಲ ರೂಪದ ವಿದ್ಯಾರ್ಥಿ ವೇತನ, ರೂ.೧,೪೫,೦೦೦/- ವೈದ್ಯಕೀಯ ಸಹಾಯ ಧನ ವಿತರಿಸಿರುವ ಬಗ್ಗೆ ತಿಳಿಸಿದರು. ಸಭೆಯಲ್ಲಿ ಸಂಘದ ಸದಸ್ಯರ ೧೫ ಮಂದಿ ಪ್ರತಿಭಾವಂತ ಮಕ್ಕಳಿಗೆ ಒಟ್ಟು ರೂ.ಖs ೭೪,೦೦೦/- ಬಹುಮಾನವಾಗಿಸಿ ಚೆಕ್‌ಗಳನ್ನು ಅಧ್ಯಕ್ಷರು ವಿತರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ೧೨ ಮಂದಿ ಜ್ಯೇಷ್ಠ ನಾಗರಿಕರಿಗೆ ಶಾಲು ಹೊದಿಸಿ , ಫಲಪುಷ್ಪ, ಸನ್ಮಾನಪತ್ರ ಪ್ರದಾನಿಸಿ ಗೌರವಿಸಲಾಯಿತು .
ಮಹನಾಗರದ ಸಯನ್-ಕೋಳಿವಾಡದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ಸುಮಾರು ೧೧೦೦ ಸದಸ್ಯರನ್ನು ಹೊಂದಿದ್ದು ಕಳೆದ ಸುಮಾರು ಎಂಟುವರೆ ದಶಕಗಳಿಂದ (೮೬ ವರ್ಷಗಳು) ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಾಯಧನ, ಆರ್ಥಿಕ ಪುರಸ್ಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ , ಬಡ ಕುಟುಂಬಗಳಿಗೆ ವೈದ್ಯಕೀಯ ಸಹಾಯಧನ, ಜ್ಯೇಷ್ಠ ಸಮಾಜ ಬಾಂಧವರಿಗೆ ಸನ್ಮಾನ, ಸಾಂಸ್ಕ್ರತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ಸಮಾಜ ಬಾಂಧವರ ಒಗ್ಗೂಡುವಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಸದಸ್ಯ ಸಂಸ್ಥೆ ಗಳಲ್ಲಿ ಒಂದಾಗಿರುತ್ತದೆ ಎಂದು ಕೆ.ಸುಬ್ಬಣ್ಣ ರಾವ್ ತಿಳಿಸಿದರು.
ಸಭೆಯಲ್ಲಿ ೨೦೨೬-೨೭ನೇ ಸಾಲಿನ ಕಾರ್ಯಕಾರಿ ಸಮಿತಿಯ ಆಯ್ಕೆ ನಡೆಸಲಾಗಿದ್ದು ಕೆ.ಸುಬ್ಬಣ್ಣ ರಾವ್ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು . ಸದಾಶಿವ ರಾವ್ , ಉಮೇಶ್ ರಾವ್ ಕೆ, ಗೋಪಾಲಕೃಷ್ಣ ರಾವ್, ಎ. ಸುರೇಶ್ ರಾವ್ ಮತ್ತು ಸುಧೀರ್ ಹೆಬ್ಬಾರ್ ಪದಾಧಿಕಾರಿಗಳಾಗಿ ಆಯ್ಕೆಗೊಂಡರು . ಬಿ.ಜನಾರ್ಧನ ರಾವ್, ಪಿ. ಶಿವರಾಯ, ಎ.ಸುಕುಮಾರ , ಸುರೇಶ್ ಭಾಗವತ್, ಎಂ.ಸಂತೋಷ್ ರಾವ್, ರಾಮಚಂದ್ರ ರಾವ್, ಸಾವಿತ್ರಿ ರಾವ್, ರಜನಿ ಜಿ.ರಾವ್, ಕ್ಷಮಾ ರಾವ್ ಕಾರ್ಯ ನಿರ್ವಾಹಕ ಮಂಡಳಿ ಸದಸ್ಯರಾಗಿ ಆಯ್ಕೆಯಾದರು. ಪಿ ಉಮೇಶ್ ರಾವ್ ಮತ್ತು ಎಂ.ಸುಭಾಶ್ಚಂದ್ರ ರಾವ್ ಅತಿಥಿ ಸದಸ್ಯರಾಗಿ ನಿಯುಕ್ತಿಗೊಂಡರು.
ಸುಚಿತ್ರಾ ರಾವ್, ವೃಂದಾ ಭಾಗವತ್ ಮತ್ತು ರಮಾದೇವಿ ಅವರ ಪ್ರಾರ್ಥನಾ ಶ್ಲೋಕದೊಂದಿಗೆ ಸಭೆಯು ಆರಂಭಗೊಂಡಿತು. ಕೋಶಾಧಿ ಕಾರಿ ಗೋಪಾಲಕೃಷ್ಣ ರಾವ್ ವಾರ್ಷಿಕ ಲೆಕ್ಕಪತ್ರಗಳನ್ನು ಸಭೆಯ ಮುಂದಿಟ್ಟರು. ಕಾರ್ಯದರ್ಶಿಉಮೇಶ್ ರಾವ್ ಕೆಮ್ಮಣ್ಣು ಸ್ವಾಗತಿಸಿ ಗತ ೮೬ನೇ ವಾರ್ಷಿಕ ಸರ್ವಸದಸ್ಯರ ಸಭೆಯ ವರದಿ ವಾಚಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.