Skip to main content

ನವಿ ಮುಂಬಯಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ವಂದೇ ಮಾತರಂ ಸಮೂಹ ಗಾನ ಹಾಗೂ ಮಾನವ ಸರಪಳಿ ಸಂಪನ್ನ.

By August 21, 2026Kannada News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ, ಆ.೨೦: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಂದೇ ಮಾತರಂ ಪ್ರತಿಷ್ಠಾನ ಆಯೋಜಿಸಿದ್ದ ವಂದೇ ಮಾತರಂ ಸಮೂಹ ಗಾನ ಹಾಗೂ ಪಾಮ್ ಬೀಚ್ ಮಾರ್ಗದಲ್ಲಿ ೮ ಕಿ.ಮೀ. ಉದ್ದದ ಮಾನವ ಸರಪಳಿ ಕಾರ್ಯಕ್ರಮ ವೈವಿಧ್ಯಮಯವಾಗಿ ಮತ್ತು ಅದ್ದೂರಿಯಾಗಿ ಸಂಪನ್ನಗೊಂಡಿತು.

ತುಂತುರು ಮಳೆಯ ನಡುವೆಯೂ ಸಾರ್ವಜನಿಕರು ಅಪಾರ ಹುರುಪು ಮತ್ತು ಉಲ್ಲಾಸದಿಂದ ಪಾಲ್ಗೊಂಡರು. ಖಾರ್‌ಘಾರ್‌ನಿಂದ ವಾಶಿವರೆಗೆ ಸುಮಾರು ೩೦ ಶಾಲೆಗಳ ವಿದ್ಯಾಥಿsಗಳು, ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯ ಸಾರ್ವಜನಿಕರು ಸೇರಿ ೬,೦೦೦ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರಲ್ಲಿ ೫೦೦ಕ್ಕೂ ಹೆಚ್ಚು ಕನ್ನಡಿಗರ ಪಾಲ್ಗೊಳ್ಳುವಿಕೆ ವಿಶೇಷವಾಗಿತ್ತು.

ಕಾರ್ಯಕ್ರಮಕ್ಕೆ ನವಿ ಮುಂಬಯಿ ಮಹಾನಗರ ಪಾಲಿಕೆಯ ಮೇಯರ್ ಸುಜಾತಾ ಪಾಟೀಲ್, ಆಯುಕ್ತ ಕೈಲಾಸ್ ಶಿಂಡೆ,  ಬೆಲಾಪುರ ವಿಧಾನಸಭಾ ಸದಸ್ಯೆ ಮಂದಾ ಮ್ಹಾತ್ರೆ, ಪೊಲೀಸ್ ಉಪ ಆಯುಕ್ತ ಬಾರಂಬೆ, ಟ್ರಾಫಿಕ್ ಉಪ ಆಯುಕ್ತ ಡಾ| ಖಾಡೆ, ಸ್ಥಳೀಯ ನಗರಸೇವಕರು ಹಾಗೂ ಇತರ ಗಣ್ಯರು ನವಿ ಮುಂಬಯಿ ಮಹಾನಗರ ಪಾಲಿಕೆ ಎದುರು ನಿರ್ಮಿಸಲಾಗಿದ್ದ ಸುಸಜ್ಜಿತ ವೇದಿಕೆಯಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ವಂದೇ ಮಾತರಂ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಉಪಾಧ್ಯಕ್ಷ ರಾಜಾರಾಂ ಆಚಾರ್ಯ, ಕೋಶಾಧಿಕಾರಿ ಡಾ. ಹರೀಶ್ ಪೂಜಾರಿ, ಸಮಿತಿ ಸದಸ್ಯರಾದ ಸುನೀಲ್ ಶೆಟ್ಟಿ, ಮಂಜುನಾಥ ಮತ್ತು ಜಗದೀಶ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸ್ಥಳೀಯ ಹೋಟೆಲ್ ಉದ್ಯಮಿಗಳಾದ ಸಂಜೀವ ಶೆಟ್ಟಿ, ಶ್ಯಾಮ್ ಶೆಟ್ಟಿ, ಧರ್ಮದರ್ಶಿ ಅಣ್ಣಿ ಶೆಟ್ಟಿ, ನವೀನ್ ಪಡು ಇನ್ನ, ಹರೀಶ್ ಶೆಟ್ಟಿ ಪಡುಬಿದ್ರೆ, ಸಮಾಜಸೇವಕರಾದ ಅನೀತಾ ಶೆಟ್ಟಿ, ಜನಾರ್ದನ ದೇವಾಡಿಗ, ರಮೇಶ್ ದೇವಾಡಿಗ, ದಯಾನಂದ ದೇವಾಡಿಗ, ಜಯಂತಿ ಪೂಜಾರಿ, ಗಂಗಾಧರ ಬಂಗೇರ ಹಾಗೂ ಆಶ್ರಯ ವೃದ್ಧಾಶ್ರಮದ ಚಂದ್ರಾವತಿ ರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೊದಲು ವಂದೇ ಮಾತರಂ ಸಮೂಹ ಗಾನ ನಡೆಯಿತು. ಬಳಿಕ ಕುದುರೆ ವಾಹನದಲ್ಲಿ ಅಲಂಕರಿಸಲಾಗಿದ್ದ ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ತೆರೆದ ವಾಹನದಲ್ಲಿ ಮೇಯರ್ ಸೇರಿದಂತೆ ಗಣ್ಯರು ಮಾನವ ಸರಪಳಿಯ ಗೌರವ ಸ್ವೀಕರಿಸಿದರು.

ಮೊರಾಜ್ ಸರ್ಕಲ್‌ನ ಸಮಾರೋಪ ಸ್ಥಳದಲ್ಲಿ ಉಡುಪಿ ಪೇಜಾವರ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಭಾರತ ಮಾತೆಗೆ ಆರತಿ ಬೆಳಗಿ, ಪಾಲ್ಗೊಂಡ ಎಲ್ಲರಿಗೂ ಆಶೀರ್ವಚನ ನೀಡಿ ಮಾನವ ಸರಪಳಿ ಕಾರ್ಯಕ್ರಮದ ಸಮಾರೋಪ ಘೋಷಿಸಿದರು.

೮ ಕಿ.ಮೀ. ವ್ಯಾಪ್ತಿಯುದ್ದಕ್ಕೂ ಸೂಚನೆಗಳು ಸ್ಪಷ್ಟವಾಗಿ ಕೇಳುವಂತೆ ೧೮೦ ಧ್ವನಿವರ್ಧಕಗಳನ್ನು ಅಳವಡಿಸಲಾಗಿತ್ತು. ತುರ್ತು ವೈದ್ಯಕೀಯ ನೆರವಿಗಾಗಿ ೫ ವೈದ್ಯರು ಹಾಗೂ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ವಂದೇ ಮಾತರಂ ಸಮೂಹ ಗಾನದ ಸಂದರ್ಭದಲ್ಲಿ ೫ ವೇದಿಕೆಗಳಲ್ಲಿ ವಿವಿಧ ನೃತ್ಯ ಪ್ರದರ್ಶನಗಳು ನಡೆದವು. ಅವುಗಳಲ್ಲಿ ಒಂದು ಕನ್ನಡಿಗರ ವೇದಿಕೆಯಾಗಿದ್ದು, ಅನಿತಾ ಆಚಾರ್ಯ ಅವರ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಪೂರ್ಣಿಮಾ ದೇವಾಡಿಗ ಅವರ ಭಾರತ ಮಾತೆಯ ವೇಷಭೂಷಣ ಸಭಿಕರ ಅಪಾರ ಮೆಚ್ಚುಗೆ ಗಳಿಸಿತು.

ಕನ್ನಡಿಗರ ವೇದಿಕೆಯಲ್ಲಿ ಜೀತ್ ಪೂಜಾರಿ ಅವರು ತುಳು ಮತ್ತು ಕನ್ನಡದಲ್ಲಿ ನಿರೂಪಣೆ ನಡೆಸಿ, ಅಗತ್ಯ ಸೂಚನೆಗಳನ್ನು ಕನ್ನಡಿಗರಿಗೆ ತಲುಪಿಸುತ್ತಿದ್ದದ್ದು, ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ವಂದೇ ಮಾತರಂ ಪ್ರತಿಷ್ಠಾನದ ಅಧ್ಯಕ್ಷ ಶಶಿ ದಾಮೋದರನ್ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜಾರಾಂ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಶನ್ಮೂಗಮ್ ಹಾಗೂ ಕೋಶಾಧಿಕಾರಿ ಡಾ. ಹರೀಶ್ ಪೂಜಾರಿ ಕಾರ್ಯಕ್ರಮ ನಿರ್ವಾಹಿಸಿದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.