
kallianpurdotcom: Mob 9741001849
ಚಿತ್ರ / ವರದಿ: ರೋನ್ಸ್ ಬಂಟ್ವಾಳ್
ಮುಂಬಯಿ, ಆ.೧೬: ಭಗವಂತನು ಶ್ರೀಕೃಷ್ಣನಾಗಿ ಅವತರಿಸಿದ್ದು ನಮ್ಮೆಲ್ಲರ ಉದ್ಧಾರಕ್ಕಾಗಿ. ಅವತಾರ ಎಂದರೆ ಭಗವಂತನು ಸ್ವತಃ ಮೇಲಿನಿಂದ ಕೆಳಗೆ ಇಳಿದು ಬಂದು, ಮಾನವ ರೂಪದಲ್ಲಿ ನಮ್ಮ ನಡುವೆ ನೆಲೆಸಿ, ನಮ್ಮನ್ನು ಉದ್ಧರಿಸುವುದು. ಇದು ಭಗವಂತನ ಅಪಾರ ಕರುಣೆಯ ಪ್ರತೀಕ. ಮಾನವ ಸಮಾಜಕ್ಕೆ ಶಾಶ್ವತವಾದ ಸಂದೇಶವನ್ನು ನೀಡುವ ಮೂಲಕ ಭಗವಂತನು ಶ್ರೀಕೃಷ್ಣನ ರೂಪದಲ್ಲಿ ಅವತರಿಸಿ, ನಮ್ಮನ್ನು ಜಾಗೃತ ಗೊಳಿಸಿದ್ದಾನೆ. ಅಂತಹ ಶ್ರೀಕೃಷ್ಣನ ಅವತಾರದ ಸ್ಮರಣೆಯೇ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಮೂಲ ಉದ್ದೇಶವಾಗಿದೆ. ನಮ್ಮ ಉದ್ಧಾರಕ್ಕಾಗಿ ಅವತರಿಸಿದ ಭಗವಂತನನ್ನು ಸ್ಮರಿಸುವುದು, ಆರಾಧಿಸುವುದು ಮತ್ತು ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಮ್ಮ ನಿಜವಾದ ಕರ್ತವ್ಯವಾಗಬೇಕು. ಶ್ರೀಕೃಷ್ಣಾವತಾರದ ಸ್ಫೂರ್ತಿಯಿಂದ ಭಗವಂತನನ್ನು ಸ್ಮರಿಸುವುದು ಕೇವಲ ಆಚರಣೆಯಲ್ಲ; ಅದು ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಬೇಕು. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಭಕ್ತಿಭಾವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಬೇಕು ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಂ (ಉಡುಪಿ ಶ್ರೀ ಪುತ್ತಿಗೆ ಮಠ) ಇದರ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನುಡಿದರು.
ಉಡುಪಿ ಶ್ರೀ ಪೇಜಾವರ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ಶುಭಾಶೀರ್ವಾದ, ಮಾರ್ಗದರ್ಶನಗಳೊಂದಿಗೆ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಮತ್ತು ಶ್ರೀ ಪೇಜಾವರ ಮಠ ಮಂಬಯಿ ಶಾಖೆಯ ವತಿಯಿಂದ ಇಂದಿಲ್ಲಿ ಶನಿವಾರ ಸಂಜೆ ಉಡುಪಿ ಶ್ರೀ ಪೇಜಾವರ ಮಠದ ಸಾಂತಾಕ್ರೂಜ್ ಪೂರ್ವದಲ್ಲಿನ ಮುಂಬಯಿ ಶಾಖೆಯಲ್ಲಿ ೯ನೇ ವಾರ್ಷಿಕ ಉತ್ಸವವನ್ನಾಗಿಸಿ ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವವನ್ನು ಉಡುಪಿ ಸಾಂಪ್ರದಾಯದಂತೆ ಆಚರಿಸಲಾಗಿದ್ದು, ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಕೃಷ್ಣ ಸಂದೇಶವನ್ನಿತ್ತು ಸದ್ಭಕ್ತರನ್ನು ಹರಸಿದರು.
ಪೇಜಾವರ ಮಠದ (ಮಧ್ವ ಭವನದ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಬಳಿಕ ನಡೆಸಲ್ಪಟ್ಟ ಕೃಷ್ಣ ಸಂದೇಶ ಕಾರ್ರ್ಉಕ್ರಮದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಕಾರ್ಯಾಧ್ಯಕ್ಷ ಅವಿನಾಶ್ ಎಸ್.ಶಾಸ್ತ್ರಿ, ಗೌರವ ಕೋಶಾಧಿಕಾರಿ ಸರ್ವಜ್ಞ ಉಡುಪ, ಭಕ್ತಾದಿಗಳಾದ ಸಿಎ| ಸುಧೀರ್ ಆರ್.ಎಲ್ ಶೆಟ್ಟಿ, ಡಾ| ವಿಜಯಕುಮಾರ್ ಶೆಟ್ಟಿ ತೋನ್ಸೆ, ಪೇಜಾವರ ಮಠದ ಮುಂಬಯಿ ಶಾಖಾ ಮುಖ್ಯ ಆಡಳಿತಾಧಿಕಾರಿ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ವಿದ್ವಾನ್ ಶ್ರೀಹರಿ ಭಟ್ ಪುತ್ತಿಗೆ, ನಿರಂಜನ್ ಜೆ.ಗೋಗ್ಟೆ ವೇದಿಕೆಯಲ್ಲಿದ್ದು ಶ್ರೀಗಳವರ ಮುಂಬಯಿ ಚಾತುರ್ಮಾಸ್ಯದ ಶುಭಾವಸರದಿ ಭಕ್ತಿಪೂರ್ವಕವಾಗಿ ಗೌರವಿಸಿದರು.
ಶ್ರೀ ಪೇಜಾವರ ಮಠದಲ್ಲಿನ ಶಿಲಾಮಯ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಸನ್ನಿಧಿಯಲ್ಲಿ ಕಳೆದ ಶುಕ್ರವಾರ ಅಪರರಾತ್ರಿ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರಧಾನ, ಮಹಾಪೂಜೆ, ಮಹಾ ಮಂಗಳರಾತಿ ಹಾಗೂ ಪ್ರಸಾದ ವಿತರಣೆ ನೆರವೇರಿಸಿ ವಾರ್ಷಿಕ ಕೃಷ್ಣಾಷ್ಟಮಿಗೆ ಚಾಲನೆ ನೀಡಲಾಯಿತು. ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಧರ್ಮಶಾಸ್ತ್ರಗಳೊಂದಿಗೆ ವಾರ್ಷಿಕ ವಿಧಿವತ್ತಾಗಿ ಚಾಲನೆಯನ್ನೀಡಿದರು. ಬೆಳಗಿನ ಜಾವ (ನಿಶೀಥ ಸಮಯಕ್ಕೆ) ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಉಂಡಾರು ತನ್ನ ಅರ್ಚಕತ್ವದಲ್ಲಿ ಶ್ರೀದೇವರಿಗೆ ರಂಗಪೂಜೆ, ಮಹಾಪೂಜೆ ನೆರವೇರಿಸಿದರು.
ಇಂದಿಲ್ಲಿ ಶನಿವಾರ ಸಂಜೆ ರಾಧಾ-ಕೃಷ್ಣರ ವೇಷ ಧರಿಸಿದ ಪುಟಾಣಿಗಳ, ವಿವಿಧ ವೇಷಾಧಾರಿಗಳ ಮೇಳೈಕೆ, ಬ್ಯಾಂಡು ವಾದ್ಯ, ಚೆಂಡೆಗಳ ನೀನಾದ, ಹುಲಿವೇಷಗಳ ಕೂಡುವಿಕೆಯಲ್ಲಿ ಮೆರವಣಿಗೆ ನೆರವೇರಿತು. ಪುರೋಹಿತ ಸುರೇಶ್ ಭಟ್ ಕುಂಟಾಡಿ ಅವರು ಶ್ರೀಕೃಷ್ಣ ಉತ್ಸವಮೂರ್ತಿಯೊಂದಿಗೆ ಸ್ಥಾನೀಯ ಬೀದಿಗಳಲ್ಲಿ ಪ್ರದಕ್ಷಿಣೆ ನಡೆಸಿದ್ದು, ಮೆರವಣಿಕೆಯುದ್ದಕ್ಕೂ ಭಕ್ತರು ಕೃಷ್ಣನ ಭಕ್ತಿಗೀತೆಗಳನ್ನಾಡಿ ಉತ್ಸವಕ್ಕೆ ಕಳೆನೀಡಿದರು. ಮಕ್ಕಳು ಪ್ರವೇಶದ್ವಾರದ ಎತ್ತರದ ಕಟ್ಟಿದ್ದ ದಹಿ-ಹಂಡಿ ಮಡಕೆಗಳನ್ನು ಒಡೆದು ಶ್ರೀಕೃಷ್ಣ ಲೀಲೋತ್ಸವ ಮೊಸರು ಕುಡಿಕೆ ಉತ್ಸವ (ವಿಟ್ಲಪಿಂಡಿ) ಸಂಭ್ರಮಿಸಿದರು. ಮುದ್ದುಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಸಲಾಗಿದ್ದು ಉಪಸ್ಥಿತ ಗಣ್ಯರು ಬಹುಮಾನ ವಿತರಿಸಿ ಅಭಿನಂದಿಸಿದರು.
ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಟ್ರಸ್ಟಿಗಳು, ಪದಾಧಿಕಾರಿಗಳು, ಸದಸ್ಯರು, ಮಠದ ಆರ್ಚಕರಾದ ಪವನಕುಮಾರ್ ಅಣ್ಣಿಗೇರಿ, ವಿಷ್ಣುತೀರ್ಥ ಸಾಲಿ, ಗುರುಪ್ರಸಾದ್ ಭಟ್ ಅಂಬಾಗಿಲು, ರಾಧಾಕೃಷ್ಣ ಭಟ್, ರಮೇಶ್ ಭಟ್, ಹಿರಿಯ ಪುರೋಹಿತ ಪ್ರಕಾಶ ಆಚಾರ್ಯ ರಾಮಕುಂಜ, ಪರೇಲ್ ಶ್ರೀನಿವಾಸ ಭಟ್, ವಾಸುದೇವ ರಾವ್, ರಾಮಚಂದ್ರ ಸಾಮಗ, ಸುದರ್ಶನ ಭಟ್, ಸಹ ಪುರೋಹಿತರು ಮತ್ತು ಮಠದ ಸಿಬ್ಬಂದಿಗಳು, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಕಮಲಾಕ್ಷ ಸರಾಫ್, ಸಮಾಜ ಸೇವಕ ಶೇಖರ್ ಜೆ.ಸಾಲ್ಯಾನ್ ಸಾಂತಕ್ರೂಜ್, ದೇವೆಂದ್ರ ಬಂಗೇರಾ ಸೇರಿದಂತೆ ಭಕ್ತರನೇಕರು ಉಪಸ್ಥಿತರಿದ್ದು ಸನ್ನಿಧಿಯಲ್ಲಿನ ಶ್ರೀಕೃಷ್ಣ ದೇವರಿಗೆ ಮಹಾರತಿಗೈದು ವಿಟ್ಲಪಿಂಡಿ (ಲೀಲೋತ್ಸವ) ಸಂಭ್ರದ ಕೃಷ್ಣಾಷ್ಟಮಿ ಶೋಭಾಯಾತ್ರೆಗೆ (ಮೆರವಣಿಗೆ) ಚಾಲನೆಯನ್ನಿತ್ತರು.
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಡಾ| ವಿಜಯಕುಮಾರ್ ಶೆಟ್ಟಿ ತೋನ್ಸೆ ನಿರ್ದೇಶನದಲ್ಲಿ ಕಲಾಜಗತ್ತು ನಾಟಕ ತಂಡವು ‘ಶರಶಯ್ಯ’ ನಾಟಕ ಪ್ರದರ್ಶಿಸಿತು. ರಾತ್ರಿ ಮಹಾಪೂಜೆ, ಬಳಿಕ ಪ್ರಸಾದ ವಿತರಣೆ ನಡೆಸಿದ್ದು, ವಾರ್ಷಿಕ ಶ್ರೀಕೃಷ್ಣಾಷ್ಟಮಿ ಸಮಾಪ್ತಿಗೊಂಡಿತು. ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಗತಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಹರಿ ಭಟ್ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.