Skip to main content
www.kallianpur.com | Email : kallianpur7@gmail.com | Mob : 9741001849

ಶತಮಾನೋತ್ಸವ ಸಂಭ್ರಮಿಸಿದ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.

By April 7, 2025Kannada News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಎ.07:  ಶತಮಾನೋತ್ಸವ ಕಂಡು ಸರ್ವತೋಮುಖ ಅಭಿವೃದ್ಧಿಯ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿ ಪ್ರಗತಿ ಪಥದತ್ತ ಸಾಗುತ್ತಿರುವ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ ಅಡಿಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸರಕಾರಿ ಶಾಲೆಗಳ ಪುಷ್ಠಿ ಯೋಜನಾ ಅತ್ಯುತ್ತಮ ಶಾಲೆ (ದಿ ಬೆಸ್ಟ್ ಎಸ್‌ಡಿಎಂಸಿ ಸ್ಕೂಲ್) ರಾಜ್ಯ ಪ್ರಶಸ್ತಿಗೆ ನಮ್ಮ ಶಾಲೆಯು ಭಾಜನವಾಗಿರುವುದು ಶಾಲಾ ಪ್ರತಿಷ್ಠೆ ಮತ್ತು ಅಭಿಮಾನ ಗೌರವದ  ಸಂಕೇತ ವಾಗಿದೆ ಎಂದು ನಂದಿಕೂರು ಎಜ್ಯುಕೇಶನ್ ಟ್ರಸ್ಟ್ (ರಿ.) ಅಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ ತಿಳಿಸಿದ್ದಾರೆ.

ರಾಜ್ಯದ 204 ಶೈಕ್ಷಣಿಕ ವಿಭಾಗಗಳ 44,762 ಸರಕಾರಿ ಶಾಲೆಗಳ ಸಮೂಹ, ವಿಭಾಗ ಹಾಗೂ ಜಿಲ್ಲಾ  ಹಂತಗಳ ವಿಶ್ಲೇಷಣೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು ಉಡುಪಿ ಜಿಲ್ಲಾ ಶೈಕ್ಷಣಿಕ ವಲಯದ 72  ಸರಕಾರಿ ಶಾಲೆಗಳಲ್ಲಿ ಮೊದಲಿಗೆ 16ವಿಭಾಗ ಹಂತದ ಶಾಲೆಗಳಲ್ಲಿ ಆಯ್ಕೆಗೊಂಡು, ಬಳಿಕ ಬ್ಲಾಕ್ ಹಂತಕ್ಕೆ ಆಯ್ಕೆಯಾದ 3 ಶಾಲೆಗಳಲ್ಲೂ ಕ್ರಮೇಣ ಜಿಲ್ಲಾ ಹಂತಕ್ಕೆ ಆಯ್ಕೆಯಾದ ೩ ಶಾಲೆಗಳಲ್ಲಿನ ಉಡುಪಿ ವಲಯದಿಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ “ನಮ್ಮ ಶಾಲೆ ನಮ್ಮ ಹೆಮ್ಮೆ” ಆಗಿದೆ. ಈ ಪ್ರಶಸ್ತಿಯೊಂದಿಗೆ ಒಂದು ಲಕ್ಷ ರೂಪಾಯಿ ಅನುದಾನ ವನ್ನು ಶಾಲಾ ಅಭಿವೃದ್ಧಿಗೆ ಸರಕಾರವು ನೀಡಿ ಪ್ರೋತ್ಸಾಹಿಸಿದ್ದು ಶಿಕ್ಷಣ ಸಚಿವರು, ರಂಗದ ಎಲ್ಲಾ ಅಧಿಕಾರಿಗಳಿಗೆ ಅಭಿವಂದಿಸುತ್ತೇವೆ ಎಂದೂ ಅಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ ತಿಳಿಸಿದ್ದಾರೆ.

ಕೇವಲ 30 ವಿದ್ಯಾರ್ಥಿಗಳಿದ್ದು, ಇನ್ನೇನು ಮುಚ್ಚಿವ ಹಂತಕ್ಕೆ ತಲುಪಿದ್ದ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹಳೆ ವಿದ್ಯಾರ್ಥಿಗಳ ಸಂಘ ದತ್ತು ಪಡೆದುಕೊಂಡು ಮೂಲ ಸೌಕರ್ಯ ಒದಗಿಸಿ 300ಕ್ಕೂ  ಅಧಿಕ ವಿದ್ಯಾಥಿsಗಳು ದಾಖಲಾತಿ ಪಡೆಯುವಂತೆ ಮಾಡಿದೆ.  ಈಚೆಗೆ ಶತಮಾನೋತ್ಸವ ಆಚರಿಸಿದ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಇತರ ಶಾಲೆಗಳಿಗೂ ಮಾದರಿಯಾಗಿದೆ. ಅಂದಿನ ದಿನಗಳಲ್ಲಿ ಶಾಲೆಯಲ್ಲಿ 600 ವಿದ್ಯಾರ್ಥಿಗಳು, ಸುಮಾರು 20 ಶಿಕ್ಷಕರಿದ್ದರು. 1954ರಲ್ಲಿ ಚೀಂಕ್ರಗುತ್ತು ರಾಘು ಶೆಟ್ಟಿ ಮತ್ತು ಗ್ರಾಮಸ್ಥರ ನೆರವಿನಿಂದ ಶಾಲೆಗೆ ನೂತನ ಕೊಠಡಿಗಳು ನಿರ್ಮಾಣ ಗೊಂಡವು.

ಶತಮಾನೋತ್ಸವ ಆಚರಿಸುತ್ತಿರುವ ನಮ್ಮ ಶಾಲೆಗೆ ಪ್ರಶಸ್ತಿ ಪ್ರಾಪ್ತಿಸಿದ್ದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವನ್ನು ಹೆಚ್ಚಿಸಿದೆ. ನಮ್ಮ ಪ್ರಮುಖ ದಾನಿಗಳ ಸಹಾಯದಿಂದ ಟ್ರಸ್ಟ್ ಅಭಿವೃದ್ಧಿ ನಿರಂತರ ಸಾಗಲಿದೆ. ಶಾಲಾ ಸಾಧನೆಯ ನಿಜವಾದ ಬೆನ್ನೆಲುಬು ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಾಪಕ ವೃಂದ, ಪೋಷಕರಾಗಿದ್ದಾರೆ. ಈ ಹಿಂದೆ ಶ್ರಮಿಸಿದ ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು, ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಹಾಗೂ ಪೋಷಕ ವೃಂದ, ವಿದ್ಯಾರ್ಥಿ ಬಳಗ, ಶಾಲಾಭಿವೃದ್ಧಿ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿ, ಸರ್ವ ಸದಸ್ಯರು, ಮಾರ್ಗದರ್ಶನವನ್ನು ನೀಡಿ ಮುನ್ನಡೆಸಿದ ಕೊಡುಗೈ ದಾನಿಗಳು, ಹಳೆವಿದ್ಯಾಥಿ ವೃಂದ ಹಾಗೂ ಗ್ರಾಮಸ್ಥರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಹಳೆ ವಿದ್ಯಾಥಿsಗಳೇ ಸೇರಿ ಆರಂಭಿಸಿದ ನಂದಿಕೂರು ಎಜುಕೇಶನ್ ಟ್ರಸ್ಟ್ ಅಡಿ ಆಂಗ್ಲಮಾಧ್ಯಮವನ್ನೂ ಈ ಶಾಲೆಯಲ್ಲಿ ಆರಂಭಿಸಿದ್ದು, ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುತ್ತಿದೆ. ಸರ್ಕಾರವು ಪುಷ್ಠಿ ಯೋಜನೆಯಡಿ ನೀಡುವ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಗೂ ಈ ಶಾಲೆಯ ಎಸ್‌ಡಿಎಂಸಿ ಪಾತ್ರವಾಗಿದೆ. ಈ ಪ್ರಶಸ್ತಿಯ ಮೊತ್ತ 1 ಲಕ್ಷದೊಂದಿಗೆ ದಾನಿಗಳ ಸಹಕಾರದಿಂದ 1.5 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಬೋರ್ಡ್ ಖರೀದಿಸಲಾಗಿದೆ. ದುರ್ಗಾಪರಮೇಶ್ವರಿ ದೇವಸ್ಥಾನದ ಗೋಪುರದಲ್ಲಿ ಬ್ರಿಟೀಷರ ಕಾಲದಿಂದಲೂ ಶಾಲೆ ನಡೆಸಲಾಗುತ್ತಿತ್ತು, ಶತಮಾನದ ಹಿಂದೆ ರಾಮ ರಾವ್ ಪಡುಬಿದ್ರಿ ಎಂಬ ಶಿಕ್ಷಕರು ಕಾಲ್ನಡಿಗೆಯಲ್ಲಿ ಬಂದು ಮುಳಿಹುಲ್ಲಿನ ಚಾವಣಿ ಅಡಿಯಲ್ಲಿ ಅಕ್ಷರಾಭ್ಯಾಸ ನಡೆಸಿದ ಶಾಲೆಯು ಅರಮಂದ ಕಾಡು ಶಾಲೆ ಎಂದು ಪ್ರಚಲಿತಗೊಂಡು ಬೆರಳಣಿಕೆಯ ವಿದ್ಯಾರ್ಥಿಗಳನ್ನು ಹೊಂದಿ, ಮುಂದೆ ಅಭಿವೃದ್ಧಿ ಹೊಂದುತ್ತಾ ಬಂತು. ಅಡ್ಡೆ, ಬೆಳ್ಳಿಬಿಟ್ಟು, ನಂದಿಕೂರು, ಸಜೆ, ಕೊಳಚೂರು, ಪಾದೆಬೆಟ್ಟು, ಕಂಚಿನಡ್ಕ, ಪಾಂಡ್ಯಾರು ಪರಿಸರದ  ವಿದ್ಯಾರ್ಥಿ ಗಳಿಗೆ ವಿದ್ಯಾರ್ಜನೆಯ ಕೇಂದ್ರವಾಗಿದೆ ಎಂದೂ ಅಧ್ಯಕ್ಷ ಅನಿಲ್ ಶೆಟ್ಟಿ ಏಳಿಂಜೆ ತಿಳಿಸಿದ್ದಾರೆ.

ಸರ್ಕಾರದಿಂದ 3 ಮಂದಿ. ಹಳೆವಿದ್ಯಾರ್ಥಿ ಟ್ರಸ್ಟ್ ವತಿಯಿಂದ 8 ಶಿಕ್ಷಕರು ಇದ್ದು, 8 ಮಂದಿಯ   ಸಂಬಳವನ್ನು  ಟ್ರಸ್ಟ್ ಭರಿಸುತ್ತಿದೆ. ಮುಂದಿನ ವರ್ಷದಲ್ಲಿ ೮ನೇ ತರಗತಿ ಆರಂಭಿಸುವ ಚಿಂತನೆಯನ್ನು ಸಮಿತಿ ಹೊಂದಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ೮ನೇ ತರಗತಿ ಆರಂಭಿಸುವ ಚಿಂತನೆಯನ್ನು ಸರ್ಕಾರಿ ಶಾಲೆಯನ್ನು ಯಾವ ರೀತಿ ಅಭಿವೃದ್ಧಿ ಪಡಿಸಬಹುದು ಎಂಬುದಕ್ಕೆ ಈ ಶಾಲೆ ಉದಾಹರಣೆ. ಶಿಕ್ಷಕರ ತಂಡ ಸಂಸ್ಕಾರಯುತ ಶಿಕ್ಷಣ, ಪತ್ಯೇತರ ಚಟುವಟಿಕೆಗಳಲ್ಲೂ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ತಿಳಿಸಿದ್ದಾರೆ.

ಶ್ರೀ ಭಗವಂತನ ಮತ್ತು ಗ್ರಾಮ ದೇವರ ದಯೆ, ಕೃಪೆಯಿಂದ, ಶಾಲೆಯು ಇನ್ನಷ್ಟು ಪ್ರಗತಿ ಪಥದತ್ತ ಸಾಗಲಿ ಹಾಗೂ ಎಲ್ಲರ ನಿಸ್ವಾರ್ಥ ಸೇವಾ ಮನೋಭಾವದಿಂದ ಶಾಲೆಯು ಬೆಳಗುತ್ತಾ ಇಲ್ಲಿ ಸುಶಿಕ್ಷಿತರಾಗುವ ವಿದ್ಯಾರ್ಥಿಗಳೆಲ್ಲರೂ ಭವ್ಯ ರಾಷ್ಟ್ರವನ್ನು ಕಟ್ಟುವ ಸದ್ಪ್ರಜೆಗಳಾಗುತ್ತಾ ವಿಯಾಲಯಕ್ಕೂ ಇನ್ನಷ್ಟು ಗೌರವಗಳು ದೊರೆಯಲಿ ಎಂದು ಹಾರೈಸುವೆ ನವಜ್ಯೋತಿ ಗೆಳೆಯರ ಬಳಗ ನಂದಿಕುರು ಅಧ್ಯಕ್ಷ ನಾಗರಾಜ ರಾವ್ ತಿಳಿಸಿದ್ದಾರೆ.

ಶಾಲೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ವಿದ್ಯಾಭಿಮಾನಿಗಳು, ಮುಖಂಡರು, ಸೇರಿ ಅಭಿವೃದ್ಧಿ ಗೊಳಿಸಿರುವುದ ರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಟ್ರಸ್ಟ್‌ನ ಕಾರ್ಯಧ್ಯಕ್ಷ ಲಕ್ಷ ಣ್ ಶೆಟ್ಟಿಬಾಲ್ ತಿಳಿಸಿದ್ದಾರೆ.

ಹಳೆವಿದ್ಯಾರ್ಥಿಗಳು ದತ್ತು ಪಡೆದ ನಂತರ ಶಾಲೆಯು ಈ ಮಟ್ಟಕ್ಕೆ ಬೆಳೆದಿದೆ. ೩ ಕೋಟಿ ವೆಚ್ಚದಲ್ಲಿ ಶಾಲೆಯ ಕಟ್ಟಡ, ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಮುಖ್ಯಶಿಕ್ಷಕಿ ರಮಣಿ ತಿಳಿಸಿದ್ದಾರೆ.

ಶಾಲೆ ಉಳಿಸಲು ಪಣ: ಕೋಂಜಾಲ್‌ಗುತ್ತು ಅನಿಲ್ ಶೆಟ್ಟಿ ಏಳಿಂಜೆ ನೇತೃತ್ವದಲ್ಲಿ ಶಾಲೆಯ ಹಳೆ  ವಿದ್ಯಾರ್ಥಿಗಳ ಸಮ್ಮಿಲನ ನಡೆಸಿ ಅಭಿಪ್ರಾಯ ಸಂಗ್ರಹಿಸಿ, ಅಂಗ್ಲಮಾಧ್ಯಮ ತರಗತಿಗಳನ್ನು ಆರಂಭಿಸುವ ಬಗ್ಗೆ ಶತಮಾನೋತ್ಸವದ ಸಮಾರಂಭದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಅದಕ್ಕಾಗಿ ಹಳೆ  ವಿದ್ಯಾರ್ಥಿಗಳು, ಊರಿನ ವಿದ್ಯಾಭಿಮಾನಿಗಳು ಸೇರಿ ನಂದಿಕೂರು ಎಜ್ಯುಕೇಶನ್ ಟ್ರಸ್ಟ್ ರಚಿಸಿ ಅನಿಲ್ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಟ್ರಸ್ಟ್ ಮೂಲಕ ಎಲ್‌ಕೆಜಿ ಯಿಂದ ಏಳನೇ ತರಗತಿ ವರೆಗೆ ಶಿಕ್ಷಣವನ್ನೂ ನೀಡುವ ಯೋಜನೆ ಕೈಗೆತ್ತಿಕೊಂಡು ಅತ್ಯಾಧುನಿಕ ಸೌಲಭ್ಯಗಳ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ಟ್ರಸ್ಟ್ ವತಿಯಿಂದ ದಾನಿಗಳ ಸಹಕಾರದಿಂದ ೧೩ ಕೋಟಿ ವೆಚ್ಚದಲ್ಲಿ ದುರಸ್ತಿಗೊಳಿಸಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಯಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ನಲಿ-ಕಲಿ ತರಗತಿಗೆ ಸಲಕರಣೆಗಳ ಜೋಡಣೆ, ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆಗೆ ಇಂಗ್ಲಿಷ್ ಹಬ್, ಗಣಿತ ಮತ್ತು ವಿಜ್ಞಾನ ಶಿಕ್ಷಣದ ಪ್ರಾಯೋಗಿಕ ಕಲಿಕೆಗಾಗಿ ಕೊಠಡಿ ತೆರೆಯಲಾಗಿದೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.