kallianpurdotcom: 9741001849
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.೦೧: ಬಂಟ್ಸ್ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷಸ್ಥಾನ ಬಲುದೊಡ್ಡ ಜವಾಬ್ದಾರಿ. ಸದಸ್ಯರೆಲ್ಲರ ಸಹಕಾರ ಮತ್ತು ಶ್ರೀದೇವರ ಆಶೀರ್ವಾದದಿಂದ ಈ ಸ್ಥಾನವನ್ನಲಂಕರಿಸಿದ ನಾನು ಅದೃಷ್ಟಶಾಲಿ. ಸಂಘಕ್ಕೆ ಸ್ಥಾಪನಾಕರ್ತರಾಗಿ ಅಧ್ಯಕ್ಷರಾಗಿ ಸಂಘವನ್ನು ಈ ತನಕ ಮುನ್ನಡಿಸಿದ ಎಲ್ಲರ ಸೇವೆಯನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಅವರ ಸೇವೆಗಳನ್ನು ಮನವರಿಸುವೆ. ಸದ್ಯ ೧೪೦ ಸದಸ್ಯ ಸಂಪುಟದ ಸಂಘದ ಸಾರಥ್ಯ ನನ್ನ ಪಾಲಿಗೆ ಒಲಿದಿದ್ದು ನನ್ನ ಭಾಗ್ಯ. ಬಂಟ್ಸ್ ಸಂಘದ ಅಧ್ಯಕ್ಷಸ್ಥಾನ ಅಂದರೆ ಪೂರ್ಣಾವಧಿಯ ಕೆಲಸ ಇದ್ದಂತೆ. ಸಹೃದಯಿ ದಾನಿಗಳ ಸಹಯೋಗದಿಂದಲೇ ಸಂಘ ಈ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣವಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ತಿಳಿಸಿದರು.
ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಬಂಟರ ಸಂಘದ ೯೬ನೇ ವಾರ್ಷಿಕ ಮಹಾಸಭೆಗೆ ದೀಪಹಚ್ಚಿ ಚಾಲನೆಯನ್ನಿತ್ತು ಸ್ವಾಗತಿಸಿ ಪ್ರಸ್ತಾವನೆಗೈದು ಸಭಾಧ್ಯಕ್ಷತೆ ವಹಿಸಿ ಪ್ರವೀಣ್ ಶೆಟ್ಟಿ ಮಾತನಾಡಿ ಬಂಟ್ಸ್ ಸಂಘ ಎಂದಿಗೂ ಸಮಯ ಕಳೆಯಲು ಇರುವ ಸಂಸ್ಥೆಯಲ್ಲ ಇದು ನಿಷ್ಠಾವಂತರಾಗಿ ಕೆಲಸ ಮಾಡಲು ಅವಕಾಶ ಒದಗಿಸುವ ಪ್ರತಿಷ್ಠಿತ ಬಲಾಢ್ಯ ಸಂಸ್ಥೆಯಾಗಿದೆ. ಇಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಪಾಲು ಇದ್ದು, ಸಮಿತಿಯಲ್ಲಿನ ಪ್ರತಿಯೊಬ್ಬರಿಗೂ ಜವಾಬ್ದಾರಿಯಿದೆ. ಪ್ರೀತಿ ವಾತ್ಸಲ್ಯದಿಂದ ಮಾತ್ರ ಸಂಸ್ಥೆ ಮುನ್ನಡೆಯಲು ಸಾಧ್ಯ. ಅಧಿಕಾರ ವಹಿಸಿದ ಆರಂಭದಲ್ಲಿಯೇ, ಬೆಂಬಲ, ಸಮರ್ಪಣಾ ಮನೋಭಾವ ಮತ್ತು ನಮ್ಮನ್ನು ಮುನ್ನಡೆಸುವ ಬಂಟ್ಸ್ ಬಗ್ಗೆ ಅಪಾರವಾದ ಉತ್ಸಾಹ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸದಾ ಒಡನಾಡಿಗಳಾಗಿರುವ ಬಂಟ್ಸ್ ತಂಡ, ಕಾರ್ಯಕಾರಿ ಸಮಿತಿ, ಸಂಘದ ಆಧಾರ ಸ್ತಂಭಗಳಾಗಿರುವ ಟ್ರಸ್ಟಿಗಳು ಮತ್ತು ಕಛೇರಿ ಸಿಬ್ಬಂದಿಗಳ ಅದ್ಭುತ ಸಹಕಾರಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಒಟ್ಟಾಗಿ, ನಾವು ಜವಾಬ್ದಾರಿಯನ್ನು ಹೆಗಲಿಗೆ ಹಾಕಿಕೊಂಡಿದ್ದು, ಸೇವೆಯಿಂದ ಇನ್ನೂ ಎತ್ತರಕ್ಕೇರುವ ಉದ್ದೇಶ ಹೊಂದಿದ್ದೇವೆ ಎಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ| ರಮೇಶ್ ಬಿ.ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಆರ್.ಶೆಟ್ಟಿ ತೆಳ್ಳಾರು, ಜೊತೆ ಕೋಶಾಧಿಕಾರಿ ಶಶಿಧರ್ ಕೆ.ಶೆಟ್ಟಿ ಇನ್ನಂಜೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಜೆ.ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ದಿವಾಕರ್ ಶೆಟ್ಟಿ ಇಂದ್ರಾಳಿ, ಪೊವಾಯಿ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಕೇಂದ್ರ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬಿ.ಆರ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಆದರ್ಶ್ ಬಿ.ಶೆಟ್ಟಿ, ಬೊರಿವಿಲಿ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕರ್ನಿರೆ ವೇದಿಕೆಯಲ್ಲಿ ಆಸೀನರಾಗಿದ್ದರು.
ವಿಶ್ವಸ್ಥ ಸದಸ್ಯರುಗಳಾದ ಐಕಳ ಹರೀಶ್ ಶೆಟ್ಟಿ (ಸಂಘದ ಮಾಜಿ ಅಧ್ಯಕ್ಷರು, ಫೆಡರೇಶನ್ ಆಫ್ ವರ್ಲ್ಡ್ ಬಂಟ್’ಸ್ ಅಸೋಸಿಯೇಶನ್’ಸ್‌ನ ಅಧ್ಯಕ್ಷ), ಡಾ| ವಿರಾರ್ ಶಂಕರ್ ಬಿ.ಶೆಟ್ಟಿ, ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಡಾ| ಪದ್ಮನಾಭ ವಿ.ಶೆಟ್ಟಿ ಮತ್ತು ಬಿ.ವಿವೇಕ್ ಶೆಟ್ಟಿ ಪ್ರಧಾನವಾಗಿ ಮಹಾಸಭೆಯ ಲ್ಲಿ ಉಪಸ್ಥಿತರಿದ್ದರು.
ಗತಸಾಲಿನಲ್ಲಿ ಸಂಘಕ್ಕೆ ಗರಿಷ್ಠ ಸದಸ್ಯತ್ವ ನೋಂದಾಯಿಸಿದ ಡೊಂಬಿವಿಲಿ ಪ್ರಾದೇಶಿಕ ಸಮಿತಿಯ ಶ್ರೀಮತಿ ಉದಯಾ ಜೆ.ಶೆಟ್ಟಿ ಅವರಿಗೆ ಸಂಘದ ಸ್ವರ್ಣ ಪದಕವನ್ನು ಮತ್ತು ವರ್ಷದ ಉತ್ತಮ ಪ್ರಾದೇಶಿಕ ಸಮಿತಿಗೆ ಐಕಳ ಹರೀಶ್ ಶೆಟ್ಟಿ ಪ್ರಾಯೋಜಕತ್ವದ ನಗದು ಬಹುಮಾನದ ಪ್ರಥಮ ಸ್ಥಾನಕ್ಕೆ ಭಾಜನವಾದ ಡೊಂಬಿವಿಲಿ ಪ್ರಾದೇಶಿಕ ಸಮಿತಿ (ಪರವಾಗಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಆನಂದ್ ಡಿ.ಶೆಟ್ಟಿ) ಹಾಗೂ ದ್ವಿತೀಯ ಸ್ಥಾನಕ್ಕೆ ಪಾತ್ರವಾದ ಭಿವಂಡಿ-ಕಲ್ಯಾಣ್-ಬದ್ಲಾಪುರ್ ಸಮಿತಿ (ಪರವಾಗಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಸುಭೋದ್ ಭಂಡಾರಿ) ಪದಾಧಿಕಾರಿಗಳು ಮತ್ತು ಸದಸ್ಯರನ್ನೊಳಗೊಂಡು ಗೌರವ ಫಲಕವನ್ನು ಸ್ವೀಕರಿಸಿದರು. ಅಧ್ಯಕ್ಷರು ಗೌರವಿಸಿ ಅಭಿವಂದಿಸಿದರು.
ಬಂಟರವಾಣಿ ಮತ್ತು ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಸಂಘವು ವಾರ್ಷಿಕವಾಗಿ ಕೊಡಮಾಡುವ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ವಾರ್ಷಿಕ ದಿ| ವೈ.ಜಿ ಶೆಟ್ಟಿ ಸ್ಮಾರಕ ಪ್ರಶಸ್ತಿತನ್ನು ಲೇಖಕಿ, ಶಿಕ್ಷಕಿ ಪ್ರಮೋದಾ ಸುರೇಂದ್ರ ಮಾಡ ಇವರಿಗೆ, ರಮಾನಾಥ ಎಸ್.ಪಯ್ಯಡೆ ಸ್ಮಾರಕ (ಎಸ್‌ಎಸ್‌ಸಿ ಮತ್ತು ಹೆಚ್‌ಎಸ್‌ಸಿ ಪ್ರತಿಭಾವಂತ ವಿದ್ಯಾಥಿsಗಳಿಗೆ) ಹಾಗೂ ದಿ| ಶಂಕರ್ ಶೆಟ್ಟಿ ಸ್ಮಾರಣಾರ್ಥ ತೇಜಮಂಜರಿ ಶೆಟ್ಟಿ ಸ್ಮಾರಕ (ಇಂಜಿನಿಯರಿಂಗ್ ಪೂರೈಸಿದ ಪ್ರತಿಭಾವಂತ ವಿದ್ಯಾಥಿsಗಳಿಗೆ) ನಗದು ಬಹುಮಾನಗಳನ್ನು ಪ್ರದಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಯೋಜಕರಾದ ಉಮಾ ಕೃಷ್ಣ ಶೆಟ್ಟಿ ಮತ್ತು ಲತಾ ಜಯರಾಮ ಶೆಟ್ಟಿ (ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆಯರು), ಸದಸ್ಯತ್ವ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಅನಿಲ್ ಎಸ್.ಶೆಟ್ಟಿ, ಬಂಟರವಾಣಿ ಸಮಿತಿ ಕಾರ್ಯಧ್ಯಕ್ಷ ಕರ್ನೂರು ಮೋಹನ್ ರೈ, ಗೌ| ಪ್ರ| ಸಂಪಾದಕ ಅಶೋಕ್ ಪಕ್ಕಳ ವೇದಿಕೆಯಲ್ಲಿದ್ದು ಪುರಸ್ಕೃತರಿಗೆ ಅಭಿನಂದಿಸಿದರು. ಸಂಪಾದಕ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಪುರಸ್ಕೃತರ ಸನ್ಮಾನಪತ್ರ ವಾಚಿಸಿ ಶುಭಾರೈಸಿದರು.
ಡಾ| ಆರ್.ಕೆ ಶೆಟ್ಟಿ ಗತ ವಾರ್ಷಿಕ ಮಹಾಸಭೆ ವರದಿ, ಹೆಚ್ಚುವರಿ ಸಾಮಾನ್ಯ ಮಹಾಸಭೆ ವರದಿ, ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿಗಳನ್ನು ಸಭೆಗೆ ತಿಳಿಸಿ ಸಭಾ ಕಲಾಪ ನಿರ್ವಹಿಸಿದರು. ಸಿಎ| ರಮೇಶ್ ಬಿ.ಶೆಟ್ಟಿ ಗತ ವಾರ್ಷಿಕ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಸಮಾಜ ಕಲ್ಯಾಣ ಸಮಿತಿ ಮಾಹಿತಿಯನ್ನು ಕಾರ್ಯಾಧ್ಯಕ್ಷ ದಿವಾಕರ್ ಶೆಟ್ಟಿ ಇಂದ್ರಾಳಿ, ಕೇಂದ್ರ ಶಿಕ್ಷಣ ಸಮಿತಿ ಮಾಹಿತಿಯನ್ನು ಕಾರ್ಯಾಧ್ಯಕ್ಷ ಬಿ.ಆರ್ ಶೆಟ್ಟಿ, ಪೊವಾಯಿ ಶಿಕ್ಷಣ ಸಮಿತಿ ಮಾಹಿತಿಯನ್ನು ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಹಾಗೂ ವರದಿಯನ್ನು ಕಾರ್ಯದರ್ಶಿ ಗೌತಮ್ ಎಸ್.ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಮಾಹಿತಿಯನ್ನು ಕಾರ್ಯದರ್ಶಿ ಸಾಗರ್ ಡಿ.ಶೆಟ್ಟಿ, ಬೊರಿವಿಲಿ ಶಿಕ್ಷಣ ಸಮಿತಿ ಮಾಹಿತಿಯನ್ನು ಕಾರ್ಯದರ್ಶಿ ಸಿಎ| ಜಗದೀಶ್ ಬಿ.ಶೆಟ್ಟಿ ಸುರತ್ಕಲ್, ಉನ್ನತ ಹಾಗೂ ವೃತ್ತಿಪರ ಶಿಕ್ಷಣ ನಿಧಿ ಸಂಯೋಜಕ ಕಿಶೋರ್ ಕುಮಾರ್ ಕುತ್ಯಾರು ಮಾಹಿತಿಯನ್ನಿತ್ತರು. ಸುಕುಮಾರ್ ಆರ್.ಶೆಟ್ಟಿ ಪಟ್ಟಿ ವಾಚಿಸಿದರು.
ಐಕಳ ಹರೀಶ್ ಶೆಟ್ಟಿ, ಡಾ| ವಿರಾರ್ ಶಂಕರ್ ಶೆಟ್ಟಿ, ಡಾ| ಸುನೀತಾ ಎಂ.ಶೆಟ್ಟಿ, ಕೃಷ್ಣ ವಿ.ಶೆಟ್ಟಿ, ಸಿಎ| ಸದಾಶಿವ ಬಿ.ಶೆಟ್ಟಿ, ಡಾ| ಪ್ರಭಾಕರ್ ಶೆಟ್ಟಿ ಬೋಳ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಂಘದ ಸರ್ವೋನ್ನತಿಗೆ ಹಾರೈಸಿದರು. ಸಂಘದ ಮಹಿಳಾ ಮತ್ತು ಯುವ ವಿಭಾಗಗಳ, ಬಂಟರವಾಣಿ ಬಳಗ, ಪ್ರಾದೇಶಿಕ ಸಮಿತಿಗಳ ಸಂಯೋಜಕರಾದ ರವೀಂದ್ರ ಎಂ.ಭಂಡಾರಿ (ಮಧ್ಯ ಮುಂಬಯಿ), ಸುಕುಮಾರ್ ಎನ್.ಶೆಟ್ಟಿ (ಪೂರ್ವ ಮುಂಬಯಿ), ವಿವಿಧ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು, ಮತ್ತು ಸದಸ್ಯರುಗಳು ಮಾಜಿ ಪದಾಧಿಕಾರಿಗಳು ಸೇರಿದಂತೆ ಸಂಘದ ಸದಸ್ಯರನೇಕರು ಹಾಜರಿದ್ದರು.
ಅಧ್ಯಕ್ಷ ಪ್ರವೀಣ್ ಶೆಟ್ಟಿ ಪದಾಧಿಕಾರಿಗಳನ್ನೊಳಗೊಂಡುಬಂಟರ ಭವನದ ಆವರಣದಲ್ಲಿನ ಜ್ಞಾನ ಮಂದಿರದಲ್ಲಿ ಪ್ರತಿಷ್ಠ್ಠಾಪಿತ ಶ್ರೀ ಮಹಾವಿಷ್ಣು, ಮಹಾಗಣಪತಿ ದುರ್ಗಾಪರಮೇಶ್ವರಿ ಮಾತೆಗೆ ಪೂಜೆ ನೆರವೇರಿಸಿ ವಿಧಿವತ್ತಾಗಿ ಮಹಾಸಭೆಗೆ ಚಾಲನೆಯನ್ನಿತ್ತರು. ಬಳಿಕ ಸಭಾಗೃಹದಲ್ಲಿ ಬಂಟಗೀತೆಯೊಂದಿಗೆ ಮಹಾಸಭೆಗೆ ವಿಧ್ಯುಕ್ತವಾಗಿ ಚಾಲನೆಯನ್ನೀಡಿದ್ದು, ಶೈಲಜಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಸಂಘಕ್ಕೆ ದೇಣಿಗೆ ನೀಡಿದ ಗಣ್ಯರನ್ನು ಅಧ್ಯಕ್ಷರು ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಗಿರೀಶ್ ಆರ್.ಶೆಟ್ಟಿ ತೆಳ್ಳಾರು ಉಪಕಾರ ಸ್ಮರಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಕೊನೆಗೊಂಡಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.