(ಚಿತ್ರ / ವರದಿ : ತಾರ ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್ಬಿಐ), ಮಾ.೧೪: ಈಶಾನ್ಯ ಭಾರತದ ರಾಜ್ಯದ ಮಿಜೋರಾಂನ ರಮಣೀಯ ರಾಜಧಾನಿ ಐಜ್ವಾಲ್ನಲ್ಲಿ ಸ್ಪಾರೋ (ಸೌಂಡ್ ಆ್ಯಂಡ್ ಪಿಚ್ಚರ್ ಆರ್ಕೆವ್ಸ್ ಫಾರ್ ರಿಸರ್ಚ್ ಆನ್ ವುಮೆನ್) ಸಂಸ್ಥೆಯು ಇಂಗ್ಲೀಷ್ ಮತ್ತು ಸಂಸ್ಕ್ರತಿ ಅಧ್ಯಯನ ವಿಭಾಗ, ಮಿಜೋರಾಂ ವಿಶ್ವವಿದ್ಯಾಲಯದ ಸಹಯೋಗ ದೊಂದಿಗೆ ಕಳೆದ ಫೆ.೨೫ ರಿಂದ ಫೆ.೨೭ರ ತನಕ ತ್ರಿದಿನಗಳ ರಾಷ್ಟ್ರ ಮಟ್ಟದ ಲೇಖಕಿಯರ ಸಮಾವೇಶ ಆಯೋಜಿಸಿತ್ತು.
ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಚಂಢಿಗಡ್, ನವದೆಹಲಿ, ಅಸ್ಸಾಂ, ಮಿಝೋರಾಂ, ಸಿಕ್ಕಿಂ, ಮೇಘಾಲಯ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ಹಲವಾರು ಲೇಖಕಿಯರು ಸಮಾವೇಶದಲ್ಲಿ ಭಾಗವಹಿಸಿದ್ದು ಸ್ಪಾರೋ ಸಂಸ್ಥೆಯ ಸ್ಥಾಪಕ ಟ್ರಸ್ಟಿ, ಪ್ರಸಿದ್ಧ ತಮಿಳು ಲೇಖಕಿ ಡಾ| ಸಿ.ಎಸ್ ಲಕ್ಷ್ಮಿ ಸಮಾವೇಶಕ್ಕೆ ಚಾಲನೆಯನ್ನಿತ್ತರು.
ಮೊದಲನೇ ದಿನ ಬೆಳಿಗ್ಗೆ ಉದ್ಘಾಟನಾ ಸಮಾರಂಭ ನೆರವೇರಿದ್ದು, ಮಿಜೋರಾಂ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಮಾರ್ಗರೇಟ್ ಪಚ್ಚು ಸ್ವಾಗತಿಸಿ ಲೇಖಕಿಯರ ಬದುಕು-ಸಾಹಿತ್ಯ ಕೃಷಿಯ ಬಗ್ಗೆ ಸಂಭಾಷಣೆ ನಡೆಸಿ ಲೇಖಕಿಯರನ್ನು ಪರಿಚಯಿಸಿದರು. ಬಳಿಕ ಇಂಗ್ಲೀಷ್ ವಿಭಾಗದ ವಿದ್ಯಾರ್ಥಿಗಳು ಸಮೂಹ ಗೀತೆ ಸಾದರಪಡಿಸಿದರು. ನಂತರ `ಮಹಿಳಾ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಜಾನಪದ ಕಥೆಗಳು ಜಾನಪದ ಹಾಡುಗಳು ಮತ್ತು ಜಾನಪದ ದಂತ ಕಥೆಗಳು ಯಾವ ಪಾತ್ರವನ್ನು ವಹಿಸುತ್ತವೆ..? ಅನ್ನುವ ವಿಚಾರದ ಬಗ್ಗೆ ಸಮೂಹ ಚರ್ಚೆ ನಡೆಸಲಾಯಿತು.
ಸ್ಪಾರೋ ಸದಸ್ಯೆ, ಕನ್ನಡ ಲೇಖಕಿಯರ ಬಳಗ ಮುಂಬಯಿ `ಸೃಜನಾ’ ಸಂಸ್ಥೆಯ ಸಹ ಸಂಚಾಲಕಿ ಡಾ| ಜಿ.ಪಿ ಕುಸುಮಾ ಲೇಖಕಿಯರ ಸಭೆಯಲ್ಲಿ ಪಾಲ್ಗೊಂಡು ಡಾ|ಸಿ.ಎಸ್ ಲಕ್ಷ್ಮೀ ಅವರೊಂದಿಗೆ ಸಭಾಷಣೆ ನಡೆಸಿದರು.
ಎರಡನೇ ದಿನದಂದು ಬೆಳಿಗ್ಗೆ ತಮಿಳು ನಾಟಕ ಪ್ರದರ್ಶನಗೊಂಡ ಬಳಿಕ ಲೇಖಕಿಯರು ಒಬ್ಬೊಬ್ಬರಾಗಿ ತಮ್ಮತಮ್ಮ ಕವನ ನಾಟಕ ಕಥೆಗಳನ್ನು ಇಂಗ್ಲಿಷ್ ಅನುವಾದದೊಂದಿಗೆ ಪ್ರಸ್ತುತಪಡಿಸಿದರು. `ಸಾಮಾನ್ಯ ವಾಗಿ ಮಹಿಳೆಯರ ಆತ್ಮಚರಿತ್ರೆಗಳು ಅಥವಾ ಮಹಿಳೆಯರ ಜೀವನ ಚರಿತ್ರೆಗಳು ಕೇವಲ ಉಪಾಖ್ಯಾನ ಮತ್ತು ಇತಿಹಾಸದ ಅಧಿಕೃತ ಮೂಲವಲ್ಲ ಎಂದು ತಳ್ಳಿ ಹಾಕಲಾಗುತ್ತದೆ.ಯಾವುದು ಅಧಿಕೃತ ಮತ್ತು ಯಾವುದು ಅಲ್ಲ ಎಂಬುದನ್ನು ಯಾರು ನಿರ್ಧರಿಸುತ್ತಾರೆ..? ಮಹಿಳಾ ಇತಿಹಾಸವನ್ನು ಯಾರು ಬರೆಯುತ್ತಾರೆ..? ಎನ್ನುವ ವಿಷಯದ ಬಗ್ಗೆ ಅಂದು ಗುಂಪು ಚರ್ಚೆ ನಡೆಸಲ್ಪಟ್ಟಿತು.
ಕೊನೆಯ ದಿನದಂದು ಬೆಳಿಗ್ಗೆ ಐಜ್ವಾಲ್ ನಲ್ಲಿಯ ಪ್ರಸಿದ್ಧ ಚರ್ಚ್ ಸೊಲೋಮನ್ ಟೆಂಪಲ್ಗೆ ಭೇಟಿ ನೀಡಿದ ಬಳಿಕ ಮೂರು ದಿನಗಳ ಕಾರ್ಯಕ್ರಮದ ಬಗ್ಗೆ ವಿಚಾರ ವಿನಿಮಯ ನಡೆದು ಕಾರ್ಯಕ್ರಮ ಕೊನೆಗೊಂಡಿತು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.