
kallianpurdotcom: Mob 9741001849
ಮುಂಬಯಿ, ಆ.೨೯: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಕೊಡಮಾಡುವ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-೨೦೨೫ ಪ್ರಶಸ್ತಿ ಪ್ರಕಟಿಸಿದ್ದು, ಸಂಘದ ಏಳನೇ ಪುರಸ್ಕಾರಕ್ಕೆ ಕರ್ನಾಟಕ ಚಿತ್ರದುರ್ಗ ಮೂಲತಃ ಡಿ.ಉಮಾಪತಿ (ದೆಹಲಿ) ಅವರನ್ನು ಪತ್ರಕರ್ತರ ಸಂಘವು ಆಯ್ಕೆ ಮಾಡಿದೆ ಎಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆೆ.
೨೦೨೫ನೇ ಸಾಲಿನ ಕಪಸಮ ಏಳನೇ ವಾರ್ಷಿಕ ಪ್ರಶಸ್ತಿ ಅರ್ಹ ಕನ್ನಡಿಗ ಪತ್ರಕರ್ತರಿಗೆ ಕೊಡಮಾಡಲಾಗುತ್ತಿ ದೆ. ಇತ್ತೀಚೆಗೆ ನಡೆಸಲ್ಪಟ್ಟ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ನಿರ್ಧಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಮತ್ತು ತೀರ್ಪುಗಾರರ ಸಮಿತಿಯ ಸದಸ್ಯರಾದ ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ಗೋಪಾಲ ತ್ರಾಸಿ ಮತ್ತು ಸಾ.ದಯಾ (ಸಂಘದ ಗೌರವ ಪ್ರಧಾನ ಕಾರ್ಯದರ್ಶಿ) ನಿರ್ಣಾಯದಂತೆ ಪತ್ರಕರ್ತ ಡಿ.ಉಮಾಪತಿ (ದೆಹಲಿ) ಇವರನ್ನು ಮಾಧ್ಯಮಶ್ರೀ-೨೦೨೫ ಪ್ರಶಸ್ತಿಗೆ ಆಯ್ಕೆ ಮಾಡಿದೆ. ದಿ| ಶ್ರೀ ಕೆ.ಟಿ ವೇಣುಗೋಪಾಲ್ ಅವರ ಸುಪುತ್ರ ಶ್ರೀ ವಿಕಾಸ್ ವೇಣುಗೋಪಾಲ್ ಪರಿವಾರದ ಸಹಕಾರ ಮತ್ತು ಕಪಸಮದ ಪ್ರಶಸ್ತಿ ನಿಧಿಯೊಂದಿಗೆ ವಾರ್ಷಿಕವಾಗಿ ಕೊಡಮಾಡುವ ಈ ಪ್ರಶಸ್ತಿಯು ರೂಪಾಯಿ ೨೫,೦೦೦/- ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆ ಹೊಂದಿರುತ್ತದೆ.
ಹಿರಿಯ ಪತ್ರಕರ್ತರಾದ ನ್ಯಾ| ವಸಂತ ಕಲಕೋಟಿ ಮುಂಬಯಿ ಇವರಿಗೆ ಪ್ರಥಮ ಪ್ರಶಸ್ತಿ (೨೦೧೯), ಜಿ.ಕೆ ರಮೇಶ್ ಮುಂಬಯಿ ದ್ವಿತೀಯ ಪ್ರಶಸ್ತಿ (೨೦೨೦), ಅಚ್ಚುತ ಚೇವ್ಹಾರ್ (ಕಾಸರಗೋಡು, ಕೇರಳ) ತೃತೀಯ ಪ್ರಶಸ್ತಿ (೨೦೨೧), ಲಾರೇನ್ಸ್ ಕುವೆಲ್ಹೋ ಮುಂಬಯಿ ಚತುರ್ಥ ಪ್ರಶಸ್ತಿ (೨೦೨೨), ಸನತ್ ಕುಮಾರ ಬೆಳಗಲಿ (ಜಮಖಂಡಿ) ಐದನೇ ಪ್ರಶಸ್ತಿ (೨೦೨೩), ಪತ್ರಕರ್ತೆ ಸಿ.ಜಿ.ಮಂಜುಳಾ ಬೆಂಗಳೂರು ಆರನೇ ಪ್ರಶಸ್ತಿ (೨೦೨೪) ಪ್ರದಾನಿಸಿ ಗೌರವಿಸಲಾಗಿದೆ.
ಇದೇ ಸೆ.೦೭ನೇ ಭಾನುವಾರ ಬೆಳಿಗ್ಗೆ ಲೋಟಸ್ ಸಭಾಗೃಹ, ಸಾಲೀಟರಿ ಕಾರ್ಪೋರೆಟ್ ಪಾರ್ಕ್, ಅಂಧೇರಿ ಪೂರ್ವ ಮುಂಬಯಿ ಇಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿ ಗಣ್ಯರ ಉಪಸ್ಥಿತಿ ಯಲ್ಲಿ ಈ ಪುರಸ್ಕಾರ ಪ್ರದಾನಿಸಲಾಗುವುದು ಎಂದು ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ಸಾ.ದಯಾ ಮತ್ತು ಗೌರವ ಕೋಶಾಧಿಕಾರಿ ವಿಶ್ವನಾಥ್ ಪೂಜಾರಿ ನಿಡ್ಡೋಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕೆ.ಟಿ ವೇಣುಗೋಪಾಲ್:
ಸಮಾಜಮುಖಿ ದೃಷ್ಠಿಕೋನವುಳ್ಳವರಾಗಿ, ಓರ್ವ ಹಿರಿಯ ಪತ್ರಕರ್ತನಾಗಿ ಮುಂಬಯಿ ಕನ್ನಡ ಪತ್ರಿಕೋದ್ಯಮ ರಂಗಕ್ಕೆ ಸುಮಾರು ಮೂರುವರೆ ದಶಕಗಳ ದೀರ್ಘಾವಧಿಯ ಅನುಪಮ, ಅತ್ಯಮೂಲ್ಯ ಸೇವೆಗೈದಿರುವರು. ಸ್ವಂತಿಕೆಯ ಪ್ರತಿಷ್ಠೆಯೊಂದಿಗೆ ಅಗ್ರಗಣ್ಯ ಪತ್ರಕರ್ತರೆನಿಸಿದ ಸ್ವರ್ಗೀಯ ಶ್ರೀ ಕೆ.ಟಿ ವೇಣುಗೋಪಾಲ್ ಅವರ ಸೇವೆ ಅನನ್ಯವೂ ಸ್ಮರಣೀಯವೂ ಆಗಿದೆ. ಕಥೆಗಾರನೂ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಹಿರಿಯ ಸದಸ್ಯರಾಗಿದ್ದು ಸಂಘದ ಸಂವಿಧಾನ ರಚನಾ ಸಮಿತಿ ಕಾರ್ಯಾಧ್ಯಕ್ಷ ಆಗಿದ್ದ ಶ್ರೀಯುತರು ತಮ್ಮ ನಿವೃತ್ತ ಜೀವನದ ಬಳಿಕ ಪುಣೆಯಲ್ಲಿ ನೆಲೆಯಾಗಿದ್ದು ೨೦೦೯ರಲ್ಲಿ ನಿಧನರಾಗಿದ್ದರು. ಈಗಲೂ ಪತ್ರಿಕೋದ್ಯಮರಂಗದಲ್ಲಿ, ಜನಮಾನಸದಲ್ಲಿ ನೆಲೆಯಾಗಿರುವ ಶ್ರೇಷ್ಠ ಪತ್ರಕರ್ತರೆಣಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಬದ್ದತೆಯಿಂದ ವೃತ್ತಿಗೆ ಘನತೆಯನ್ನು ತಂದೊದಗಿಸಿದ ಕೆಟಿವಿ ನಿಷ್ಠೆಯನ್ನು ಭವಿಷ್ಯತ್ತಿನ ಪತ್ರಕರ್ತ ಸಮುದಾಯಕ್ಕೆ ಮಾದರಿ ಆಗಿಸುವ ನಿಟ್ಟಿನಲ್ಲಿ ಕೆ.ಟಿ ವೇಣುಗೋಪಾಲ್ ಸ್ಮರಣಾರ್ಥ ಕನ್ನಡಿಗ ಪತ್ರಕರ್ತರ ಸಂಘವು ವರ್ಷಂಪ್ರತಿ ಈ ಪ್ರಶಸ್ತಿ ಪ್ರದಾನಿಸುತ್ತಿದೆ.
ಶ್ರೀ ಡಿ.ಉಮಾಪತಿ:
೧೯೫೯ರ ಮಾರ್ಚ್ ೧೮ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಡಿ.ಉಮಾಪತಿ ಅವರು ಮೈಸೂರು ಮಹಾರಾಜ ಕಾಲೇಜ್‌ನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಎರಡನೆ ರ‍್ಯಾಂಕ್ ಪಡೆದವರು. ನ್ಯೂ ಇಂಡಿಯನ್ ಎಕ್ಸ್ಪ್ರೆಸ್‌ನ ಸಮೂಹ ಸಂಸ್ಥೆ ಯ ಕನ್ನಡ ಪ್ರಭ, ಈ ಟಿವಿಯ ದೆಹಲಿ ಪ್ರತಿನಿಧಿಯಾಗಿ ಕಳೆದ ೨೭ ವರ್ಷಗಳ ಪರಿಣಾಮಕಾರಿ ವರದಿಗಳಿಂದ ಹೆಸರುಗಳಿಸಿದವರು. ಪಾರ್ಲಿಮೆಂಟ್ ವರದಿ, ಚುನಾವಣಾ ವಿಶ್ಲೇಷಣೆಗಳು, ಸುಪ್ರೀಂ ಕೋರ್ಟು ಗಳಲ್ಲಿನ ನದಿ ನೀರು ನ್ಯಾಯಾಧೀಕರಣ ವ್ಯಾಜ್ಯಗಳ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಇವರದ್ದಾಗಿದೆ. ದೆಹಲಿಯಲ್ಲಿ ನೆಲೆಸಿರುವ ಡಿ.ಉಮಾಪತಿ ಅವರು ಆಂದೋಲನ, ರೈತ ಚಳವಳಿ, ವಿಜಯಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ. ಪ್ರಸ್ತುತ `ನ್ಯಾಯಪಥ’ (ಗೌರಿ ಮಿಡಿಯಾ) ಮತ್ತು `ಈದಿನ’ ವೆಬ್ ಜರ್ನಲ್ ಸಂದರ್ಶಕ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಡಮಾಡುವ ‘ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ’ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತರೇ ಡಿ.ಉಮಾಪತಿ. ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯ ಕುರಿತು ವರದಿ, ವಿಶೇಷ ಲೇಖನಗಳ ಪ್ರಕಟಣೆಯನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಮುಖ್ಯಮಂತ್ರಿಯವರು ೨೦೨೪ರ ಆಯವ್ಯಯದಲ್ಲಿ ಹಿರಿಯ ಪತ್ರಕರ್ತ ‘ವಡ್ಡರ್ಸೆ ರಘುರಾಮಶೆಟ್ಟಿ’ ಅವರ ಹೆಸರಿನ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಸೇರಿದಂತೆ ಹತ್ತುಹಲವಾರು ಗೌರವಗಳಿಗೆ ಭಾಜನರಾಗಿರುವರು. `ದೆಹಲಿ ನೋಟ’, `ಪದಕುಸಿಯೇ ನೆಲವಿಲ್ಲ’ ಉಮಾಪತಿ ಅವರ ಎರಡು ಮಹತ್ವದ ಕೃತಿ ಪ್ರಕಟವಾಗಿವೆ.
******************************************************************
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.