
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.೨೮: ದಸರಾ ಆರಂಭದೊಡನೆ ಉಕ್ಕಿ ಬರುವ ಬಾಲ್ಯದ ಮಂಗಳೂರ ದಸರಾ ದಿನಗಳ ನೆನಪು.! ವೇಷಗಳಗಾಗಿ ಕಣ್ಣು, ಕಿವಿ ಎಲ್ಲ ತೆರೆದು ಕಾಯುತ್ತಿದ್ದ ಪರಿ! ಹಾಲಿನ ವೇಷ, ರೊಟ್ಟಿ ವೇಷ, ಪೇಪರ್ ನವನ ವೇಷ, ಕಳ್ಳ ವೇಷ, ಕೊರಗರ ವೇಷ, ಸಿದ್ಧಿ ವೇಷ, ಹುಲಿವೇಷ, ಕರಡಿ ವೇಷ, ರಾಧಾಕೃಷ್ಣ ವೇಷ.! ಹುಲಿವೇಷದ ಬ್ಯಾಂಡ್ ಕೇಳಿದೊಡನೆ ನೋಡಲೆಂದು ಓಡಿದ ಭರದಲ್ಲಿ ಬಿದ್ದು ದೊಡ್ಡ ಬೆಣಚು ಕಲ್ಲು ತೊಡೆಗೆ ಬಡಿದು ಆದ ಗಾಯದ ಗುರುತು.! ಎಂದು ಬೃಹನ್ಮುಂಬಯಿಯಲ್ಲಿನ ಹಿರಿಯ ಲೇಖಕಿ ಶ್ಯಾಮಲಾ ಮಾಧವ್ ಅಭಿಪ್ರಾಯ ಪಟ್ಟಿದ್ದಾರೆ.
ಶಾಲೆಯ ದಸರಾ ಆಚರಣೆಯ ಹಬ್ಬದಲ್ಲಿ ಕೊರಗರ ವೇಷ ಹಾಕಿ ಬಹುಮಾನ ಪಡೆದುದು! ನನ್ನ ಶಾರದಮ್ಯಾಯಿ. ಇದ್ದಿಲನ್ನು ಹುಡಿಗೈದು ನೀರು ಬೆರೆಸಿ ನನ್ನ ಮೈಗೆಲ್ಲಾ ಹಚ್ಚಿದ್ದರು. ಸೊಂಟಕ್ಕೂ, ಕೈ ಕಾಲ್ಗಳಿಗೂ, ಕೊರಳಿಗೂ ಮಾವಿನೆಲೆಗಳನ್ನು ಕಟ್ಟಿದ್ದರು ಎಂದಿರು ಶ್ಯಾಮಲಾ ಮಾಧವ್, ಈಗ ಕೊರಗರ ವೇಷ ಜಾತಿನಿಂದನೆ ಎಂಬ ಕಾರಣಕ್ಕೆ ನಿರ್ಬಂಧಿತವಾಗಿದೆ. ಸಿದ್ಧಿ ವೇಷವೂ ಅಷ್ಟೇ ಎಂದು ತಿಳಿಸಿದ್ದಾರೆ.
ದೇಹದ ಹಿಂದೆ ಮುಂದೆ ದಿಂಬುಗಳನ್ನು ಕಟ್ಟಿಕೊಂಡು ಪರಸ್ಪರ ತಾಡಿಸುತ್ತಾ ‘ಸಿದ್ಧಿ ಹವರ್ ಸಿಧ್ಧಿ, ಮಕ್ಕ ಮದೀನಾ, ಬೊಂಬೈ ಕೊ ಜಾನಾ, ಕಾಪಿ ರೊಟ್ಟಿ ಪೀನಾ’ ಎಂದು ನಾವು ಮಕ್ಕಳು ಹಾಡಿಕೊಳ್ಳುತ್ತಿದ್ದೆವು. ಆ ವೇಷಗಳ ಕೈಯಲ್ಲಿ ಹೆಮ್ಮೆಯಿಕದಚೂರು ಕಾಸು ಇಡುತ್ತಿದ್ದೆವು. ಹುಲಿ ವೇಷ ಹೋಗುತ್ತಿದ್ದುದು ಸಿರಿವಂತರ ಮನೆಗಳಿಗೆ ಮಾತ್ರ. ಹಿಂಬಾಲಿಸಿ ಹೋದ ನಮ್ಮ ಕಣ್ಣುಗಳಿಗೂ ಅಲ್ಲೇ ದರ್ಶನ ಭಾಗ್ಯ.!
ಕ್ರಮೇಣ ಸಮಾಜದ ಸ್ಥಿತಿಗತಿ ಬದಲಾಯ್ತು. ಹಣಕ್ಕಾಗಿ ವೇಷ ಹಾಕಬೇಕಾದ ಅಗತ್ಯವೂ ಇಲ್ಲವಾಯಿತು. ಈಗ ಕುದ್ರೋಳಿ, ವೆಂಕಟ್ರಮಣ ಶಾರದೋತ್ಸವಗಳ ವೈಭವದಲ್ಲಿ ನೂರಾರು ಹುಲಿವೇಷ ಗಳ, ಇತರ ಟ್ಯಾಬ್ಲೋಗಳ ಸಂಭ್ರಮ, ದೇವಿ ಶಾರದೆಯ ದರ್ಶನ ವೈಭವ ಅಮೋಘ ವಾಗಿದ್ದರೂ, ಆ ಎಳೆಯ ದಿನಗಳ ನೆನಪಿನ ಸಿರಿ ಅಳಿದು ಹೋಗುವುದೇ.? ಎಂದು ತನ್ನ ಬಾಲ್ಯದ ದಸರಾ ಹಳೆ ನೆನಪುಗಳನ್ನು ಶ್ಯಾಮಲಾ ಮಾಧವ್ ಮೆಲುಕು ಹಾಕಿದ್ದಾರೆ.
Thank you, dear Ron’s.
ನನ್ನ ಸಿಹಿ ನೆನಪುಗಳನ್ನು ಓದುಗರ ಬಳಇಗೆ ಒಯ್ದ ನಿಮ್ಮ ಪ್ರೀತಿಗೆ ಕೃತಜ್ಞೆ
— ಶ್ಯಾಮಲಾ ಮಾಧವ