Skip to main content
www.kallianpur.com | Email : kallianpur7@gmail.com | Mob : 9741001849

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಉದ್ಘಾಟನೆ ಮಹಿಳೆಯರಿಗೆ ಪುರುಷರ ಆಶ್ರಯಕ್ಕಿಂತ ಸಕಾಲಿಕ ಪ್ರೋತ್ಸಾಹ ಬೇಕಾಗಿದೆ-ಧರ್ಮಾಧಿಕಾರಿ ಹೆಗ್ಗಡೆ.

By May 30, 2024News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಮೇ.೩೦: ಮಹಿಳೆಯರು ಬುದ್ಧಿ ವಂತರಾಗಿದ್ದು, ಸದಾಜಾಗೃತರಾಗಿರುತ್ತಾರೆ. ಅವರಲ್ಲಿ ಅದ್ಭುತ ಶಕ್ತಿ ಇದೆ. ಆದುದರಿಂದಲೆ ಇಂದು ಅವರು ತಮಗೆ ಸಿಗುವ ಎಲ್ಲಾ ಅವಕಾಶ, ಸೌಲಭ್ಯಗಳ ಸದುಪಯೋಗ ಪಡೆದು ಸ್ವಾವಲಂಬಿ ಗಳಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿ ಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ವೀರೇಂದ್ರ ಹೆಗ್ಗಡೆ ಅವರು ಗುರುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ ಮಹಿಳೆಯರಿಗೆ ಪುರುಷರಿಂದ ಆಶ್ರಯ ಬೇಕಾಗಿಲ್ಲ. ಸದಾ ಸಕಾಲಿಕ ಪ್ರೋತ್ಸಾಹ, ಪ್ರೇರಣೆ ಅಗತ್ಯವಾಗಿದೆ. ಕುಟುಂಬ ಮತ್ತು ಸಮಾಜದ ಸುಗಮ ನಿರ್ವಹಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಬಾಲ್ಯದಿಂದಲೆ ಮಕ್ಕಳನ್ನು ತಿದ್ದಿ, ತೀಡಿ ಉತ್ತಮ ಸಂಸ್ಕಾರ ನೀಡಿಆದರ್ಶ ವ್ಯಕ್ತಿತ್ವ ರೂಪಿಸುವುದು ಮಾತೆಯರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ. ಆದುದರಿಂದ ಲೆ ಧರ್ಮಸ್ಥಳದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡುವಾಗ ಪೋಷಕರಿಗೂ ತಜ್ಞರಿಂದ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಎಂದರು.

ಎಲ್ಲಾ ಶಾಖೆಗಳ ಕಾರ್ಯನಿರ್ವಹಣೆಯನ್ನು ಏಕಸೂತ್ರದಲ್ಲಿ ಪೋಣಿಸಿ ಸಂದರ್ಭೋಚಿತವಾಗಿ ಮಾಹಿತಿ, ಮಾರ್ಗ ದರ್ಶನ ನೀಡುವುದು ಒಕ್ಕೂಟದ ಜವಾಬ್ದಾರಿಯಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವ- ಸಹಾಯ ಸಂಘಗಳಿಗೆ ಒಕ್ಕೂಟದ ನೇತೃತ್ವದಲ್ಲಿ ಸದಾ ಪ್ರೋತ್ಸಾಹ, ಮಾರ್ಗದರ್ಶನ ನೀಡಲಾಗುತ್ತದೆ ಎಂದರು. ಕಾಲಕ್ಕೆ ತಕ್ಕಂತೆ ಅವರವರ ಪ್ರಾಯಕ್ಕೆಅನುಗುಣವಾಗಿ ಮಾತೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಮುಂದಿನ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರೂಪಿಸಬೇಕು ಎಂದು ಹೆಗ್ಗಡೆ ಸಲಹೆ ನೀಡಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಾಧನೆ ಯನ್ನು ಶ್ಲಾಘಿಸಿ ಎಲ್ಲಾ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು.

ಹೇಮಾವತಿ ಹೆಗ್ಗಡೆಯವರು ಬರೆದ `ಗೆಳತಿ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಚಲನಚಿತ್ರ ನಟಿ ಪದ್ಮಜಾ ರಾವ್ ಮಾತನಾಡಿ ಧರ್ಮಸ್ಥಳದಲ್ಲಿ ತಮಗೆಲ್ಲ ದೊರೆತ ರಾಜ ಮರ್ಯಾದೆಯೊಂದಿಗೆ ಗೌರವಪೂರ್ವಕ ಆತಿಥ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಸ್ವಾವಲಂಬಿಗಳಾದರೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿ ಬರುತ್ತದೆ. ಮಹಿಳಾ ಸಬಲೀಕರಣವೂ ಆಗುತ್ತದೆ ಎಂದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದರಜತ ಸಂಚಿಕೆ ಬಿಡುಗಡೆಗೊಳಿಸಿದ ಮಕ್ಕಳ ಹೃದ್ರೋಗ ತಜ್ಞೆ ಡಾ| ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿ, ದಾನ ಚಿಂತಾಮಣಿ ಅತ್ತಿಮಬ್ಬೆ, ಉಳ್ಳಾಲದ ರಾಣಿಅಬ್ಬಕ್ಕ, ಮೊದಲಾದ ವರು ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಮಹಿಳೆಯರು ಸದಾ ಮಾತನಾಡುವ ಮಾತೆಯರಾಗದೆ, ಚಿಂತೆ ಯನ್ನು ಬಿಟ್ಟು ಸದಾ ಚಿಂತನೆಯನ್ನು ಮಾಡುವ ಚಿಂತಾಮಣಿಗಳಾಗಬೇಕು. ಮಹಿಳೆಯರು ಸಮ ರ್ಪಣಾ ಮನೋಭಾವದಿಂದ ಆರೋಗ್ಯಪೂರ್ಣ, ಕುಟುಂಬ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅಮೂಲ್ಯ ಕೊಡುಗೆ ನೀಡಬೇಕು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದು ಕಿವಿಮಾತು ಹೇಳಿದರು.

ಸಾಧಕರ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಬೆಳಗಾವಿಯ ಸುಮನ್ ಪತ್ರಾವಳಿ, ಮೂಡಬಿದ್ರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುಶೀಮಾ ಯಶವಂತ್, ಛಾಯಾಚಿತ್ರಗ್ರಾಹಕಿ ಹುಣಸೂರಿನ ಛಾಯಾ ಸುನಿಲ್ ಮತ್ತು ಮೈಸೂರಿನ ಕುಮಾರಿ ಅನನ್ಯ ಜೈನ್‌ ಅವರನ್ನು ಗೌರವಿಸಲಾಯಿತು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಗೌರವಾಧ್ಯಕ್ಷೆ ಹೇಮಾವತಿ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೈನ ಧರ್ಮದಲ್ಲಿ ತ್ಯಾಗ, ಅಹಿಂಸೆ ಮತ್ತು ವಿರಕ್ತಿಗೆ ಪ್ರಾಶಸ್ತವಿದೆ. ಮಹಿಳೆಯರು ಕುಟುಂಬದ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಬಿಂದುವಾಗಿ ಮಾತ್ರವಲ್ಲದೆ ಸಿಂಧುವಾಗಿಯೂ ಎಲ್ಲರೊಂದಿಗೂ ಮುಕ್ತವಾಗಿ ಬೆರೆತು ನಿರಂತರ ಪ್ರಗತಿಗೆ ಸಹಕರಿಸಬೇಕು. ಮಹಿಳೆಯರಿಗೆ ಮಂದಿರಗಳು ಪಾಠ ಶಾಲೆಯಾದರೆ, ಸಮಾಜ ಪ್ರಯೋಗ ಶಾಲೆ ಆಗಬೇಕು. ಮಹಿಳೆಯರ ತ್ಯಾಗ, ಸೇವೆ, ಪ್ರೀತಿ- ವಿಶ್ವಾಸಕ್ಕೆ, ಸಮಾಜಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸೇವೆಯಿಂದ ಸಿಗುವ ತೃಪ್ತಿ, ಸಂತೋಷ ಮತ್ತು ನೆಮ್ಮದಿಯೇ ಮಹಿಳೆಯರಿಗೆ ದೊಕುವ ನಿಜವಾದ ಪ್ರಶಸ್ತಿ ಎಂದು ಅಭಿಪ್ರಾಯಪಟ್ಟರು. ಮಹಿಳೆಯರು ತಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರವಂತರಾಗಿ ರೂಪಿಸಬೇಕು ಎಂದೂ ಅವರು ಕರೆಯಿತ್ತರು.

ಡಿ.ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ.ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಿನಿ ಪದ್ಮರಾಜ್ ಸ್ವಾಗತಿಸಿದರು. ಕುಮುದಾ ನಾಗಭೂಷಣ್ ಕಾರ್ಯಕ್ರಮ ನಿರ್ವಹಿಸಿದರು. ಜಯಶ್ರೀ ಧನ್ಯವಾದವಿತ್ತರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.