Skip to main content
www.kallianpur.com | Email : kallianpur7@gmail.com | Mob : 9741001849

ಅನಿತಾ ಪಿ.ತಾಕೊಡೆ ಅವರ ನಿವಾಳಿಸಿ ಬಿಟ್ಟ ಕೋಳಿ, ಲೋಕಲ್ ಟ್ರೆನ್ ಎರಡು ಕೃತಿಗಳ ಬಿಡುಗಡೆ

By June 22, 2023Mumbai News
(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್

ಮುಂಬಯಿ, ಜೂ.೨೨: ನಮ್ಮ ಮುಖ್ಯ ಉದ್ದೇಶವೇನೆಂದರೆ ಕನ್ನಡವನ್ನು ಉಳಿಸಿ ಬೆಳೆಸಬೇಕು. ಕನ್ನಡವು ನಿಂತ ನೀರಾಗಬಾರದು ಅದು ನದಿಯಂತೆ ಹರಿಯುತ್ತಿರಬೇಕು. ಇದರ ಸಲುವಾಗಿ ಕನ್ನಡ ಕಲಿಕೆಗೆ ಹೆಚ್ಚಿನ ಪ್ರೊತ್ಸಾಹ ನೀಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಘದ ಮುಖಾಂತರ ಸಹಕರಿಸುತ್ತಿದ್ದೇವೆ ಎಂದು ಜೂನ್ ೧೮ರಂದು ಡೊಂಬಿವಲಿ ಪೂರ್ವದ ಮಂಜುನಾಥ ಸಭಾಗ್ರಹದಲ್ಲಿ ನಡೆದ ಅನಿತಾ ಪಿ.ತಾಕೊಡೆಯವರ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿಯವರು ನುಡಿದರು.

ಅನಿತಾ ಅವರ ದೊಡ್ಡ ಅಭಿಮಾನಿಗಳ ಬಳಗವೇ ಬಂದಿದೆ. ರಾಜಕಾರಣಿಗಳ ಹಿಂದೆ ಜನ ಹೋಗುವುದನ್ನು ನೋಡಿದ್ದೇನೆ. ಕವಿಗಳಿಗೆ ಇಷ್ಟು ದೊಡ್ಡ ಅಭಿಮಾನಿ ಬಳಗವಿದೆಯೆಂದು ಇವತ್ತೇ ಗೊತ್ತಾಗಿದ್ದು. ಅನಿತಾ ತಾಕೊಡೆಯವರು ನಮ್ಮ ಡೊಂಬಿವಲಿಯ ಹೆಮ್ಮೆ. ಸಣ್ಣ ವಯಸ್ಸಿನಲ್ಲಿಯೇ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರ ಸಾಹಿತ್ಯ ಕೈಂಕರ್ಯಕ್ಕೆ ಕರ್ನಾಟಕ ಸಂಘದ ಬೆಂಬಲ ಯಾವತ್ತಿಗೂ ಇದೆ ಎನ್ನುತ್ತ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಹಕಾರ ನೀಡುತ್ತ ಬಂದವರನ್ನು ಸ್ಮರಿಸಿದರು.

ಸಂಘದ ಕಾರ್ಯಾಧ್ಯಕ್ಷರಾದ ಸುಕುಮಾರ್ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಕೆಲವು ಸಮಯದ ಅಂತರದಲ್ಲಿ ನಾವು ಈ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮುಂಬೈಯ ಹೆಚ್ಚಿನ ಸಾಹಿತಿಗಳು ಇಂದು ಡೊಂಬಿವಲಿಗೆ ಬಂದಿದ್ದಾರೆ. ಇನ್ನು ಮುಂದೆಯೂ ಇದೇ ಸಹಕಾರ ಸಿಗಲಿ ಎಂದರು.

ನಿವಾಳಿಸಿಬಿಟ್ಟ ಕೋಳಿ ಕಥಾಸಂಕಲನವನ್ನು ಬಿಡುಗಡೆಗೊಳಿಸಿದ ಕರ್ನಾಟಕ ಮಲ್ಲ ದಿನಪತ್ರಿಕೆಯ ಉಪಸಂಪಾದಕರಾದ ಶ್ರೀನಿವಾಸ ಜೋಕಟ್ಟೆಯವರು ಡೊಂಬಿವಲಿ ಕರ್ನಾಟಕ ಸಂಘಕ್ಕೆ ಸಾಹಿತ್ಯಿಕವಾದ ಒಂದು ವಿಶೇಷ ಪರಂಪರೆಯಿದೆ. ಅನಿತಾಳ ಸಾಹಿತ್ಯಿಕ ಬೆಳವಣಿಗೆಯನ್ನು ಆರಂಭದಿಂದಲೂ ಕಾಣುತ್ತ ಬಂದಿದ್ದೇನೆ. ಮುಂಬೈಯ ಕನ್ನಡ ಸಾಹಿತ್ಯವನ್ನು ಚುರುಕುಗೊಳಿಸುವಲ್ಲಿ, ಕರ್ನಾಟಕದಲ್ಲೂ ಗುರುತಿಸುವಲ್ಲಿ ಅನಿತಾ ತಾಕೊಡೆಯವರ ಸಾತತ್ಯವನ್ನು ನಾವು ಗಮನಿಸಬೇಕು. ಈ ಕಥಾ ಸಂಕಲನದಲ್ಲಿ ಅವರು ಕಂಡು ಅನುಭವಿಸಿದ, ಜೀವನಾನುಭವಗಳಲ್ಲಿ ದಕ್ಕಿದಂಥ ವಸ್ತುಗಳನ್ನು ಕಥೆಯಾಗಿಸಿದ್ದಾರೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಲೋಕಲ್ ಟ್ರೆನ್ ಅಂಕಣ ಬರಹಗಳ ಸಂಕಲನವನ್ನು ಲೋಕಾರ್ಪಣೆಗೊಳಿಸಿದ ಕತೆಗಾರ ವಸಂತ ಕಲಕೋಟಿಯವರು, ಈ ಕೃತಿಯ ವಿಶೇಷವೇನೆಂದರೆ ಅನಿತಾ ಅವರು ತಾವು ನೋಡಿದ ವ್ಯಕ್ತಿಗಳನ್ನು, ಘಟನೆಗಳನ್ನು ಪ್ರಾಮಾಣಿಕವಾಗಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಅವರ ಭಾಷೆ ಬಹಳ ಸೊಗಸಾಗಿದೆ ಯಾರೂ ಓದಿ ಅರ್ಥಮಾಡಿಕೊಳ್ಳಬಹುದು ಎಂದು ಪ್ರಶಂಸಿಸಿದರು.

ಕವಿ ನಾಟಕಕಾರ ಸಾದಯ ಅವರು, ಈ ಕಥಾ ಸಂಕಲನದಲ್ಲಿ ಪ್ರೀತಿ ಪ್ರೇಮ ಆಕರ್ಷಣೆ, ವಾತ್ಸಲ್ಯ, ಸಂಬಂಧ ಹೀಗೆ ಹಲವು ಭಾವಗಳನ್ನು ನಾವು ಕಾಣಬಹುದು. ಇಲ್ಲಿನ ಹೆಚ್ಚಿನ ಕತೆಗಳು ಭಾವನೆಗಳಿಗೆ ಸಂಬಂಧಪಟ್ಟವುಗಳಾಗಿದ್ದು ಕೆಲವು ಒಮ್ಮೆಲೆ ತಿರುವನ್ನು ಪಡೆದುಕೊಳ್ಳುತ್ತವೆ ಎಂದು ಕಥಾಸಂಕಲ ನದಲ್ಲಿರುವ ಕತೆಗಳ ವೈಶಿಷ್ಟತೆಯನ್ನು ಪರಿಚಯಿಸಿದರು.

ಕಂಠದಾನ ಕಲಾವಿದೆ ನಳಿನಾ ಪ್ರಸಾದ್ ಅವರು, ‘ಈ ಲೋಕಲ್ ಟ್ರೆನ್ ತನ್ನದೇ ಆದ ವೈಶಿಷ್ಟತೆಗಳಿಂದ ಆಪ್ತವೆನಿಸುತ್ತದೆ. ಮುಂಬೈಯ ಸಮಸ್ತ ಜೀವನಕ್ರಮ, ಅದರ ಭಾಗವಾದಂಥ ಸಾಮಾನ್ಯರ ಬದುಕನ್ನು, ವೈವಿಧ್ಯಮಯ ಸಂಸ್ಕ್ರತಿಯನ್ನು ಪರಿಶೀಲಿಸುವಂಥ ಅನಿತಾ ಅವರ ಅಂಕಣಬರಹಗಳ ವಿಶಿಷ್ಟ ಬಗೆಯವು. ಇಲ್ಲಿ ಲೇಖಕಿ ಸ್ವತಃ ನಿರೂಪಕಿಯಾಗಿ ನಿಂತು ನಿರ್ವಹಿಸಿರುವುದು ಲೇಖನಗಳಿಗೆ ತಾಜಾತನವನ್ನೂ, ಲವಲವಿಕೆಯನ್ನೂ ನೀಡುತ್ತದೆ. ಈ ಪ್ರಬಂಧಗಳಲ್ಲಿ ಲಘುದಾಟಿಯಲ್ಲೇ ಜೀವನ ವ್ಯಾಪಾರದ ಸೂಕ್ಷಗಳನ್ನು ಹಿಡಿಯುವ ಹವಣಿಕೆಯಿರುವುದನ್ನು ಗಮನಿಸಬಹುದಾಗಿದೆ. ಎಂದು ಕೃತಿಯ ಒಳತಿರುಳನ್ನು ಸೊಗಸಾಗಿ ಪೇಕ್ಷಕರ ಮುಂದೆ ತೆರೆದಿಟ್ಟರು.

ಕೃತಿಕರ್ತೆ ಲೇಖಕಿ ಅನಿತಾ ಪಿ. ತಾಕೊಡೆ ತಮ್ಮ ಮನದಾಳದ ಮಾತುಗಳನ್ನಾಡುತ್ತ ಆರಂಭದಿಂದಲೂ ನನ್ನ ಸಾಹಿತ್ಯಿಕ ಚಟುವಟಿಕೆಗಳಿಗೆ ಡೊಂಬಿವಲಿ ಕರ್ನಾಟಕ ಸಂಘದಿಂದ ಪ್ರೇರಣೆ ಸಿಕ್ಕಿದೆ. ನನ್ನೆರಡು ಕೃತಿಗಳು ನಾನಿರುವ ಪರಿಸರದಲ್ಲಿ ಲೋಕಾರ್ಪಣೆಯಾಗಬೇಕೆಂಬ ಇಚ್ಛೆಯನ್ನು ಇದೇ ಸಂಘ ನನ್ನ ನಿರೀಕ್ಷೆಗೂ ಮೀರಿ ಅದ್ದೂರಿಯಾಗಿ ನೆರವೇರಿಸಿದೆ. ಇಂದಿನ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ದೂರದಿಂದ ಸಹೃದಯ ಬಾಂಧವರು ಪ್ರೀತಿಯಿಂದ ಡೊಂಬಿವಲಿಗೆ ಬಂದಿದ್ದಾರೆ. ಮುಂಬೈಯಲ್ಲಿ ನಾನು ಸಂಪಾದಿಸಿದ್ದು ತುಳು ಕನ್ನಡಿಗರ ಪ್ರೀತಿ. ಅದುವೇ ನನ್ನ ಜೀವನದ ಆಸ್ತಿ ಎನ್ನುತ್ತ, ತನ್ನ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ ಎಲ್ಲ ಸಂಘ ಸಂಸ್ಥೆಗಳ ಸಹಕಾರವನ್ನು ನೆನೆದು ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ವತಿಯಿಂದ ಅನಿತಾ ಪಿ.ತಾಕೊಡೆ ದಂಪತಿಯನ್ನು ಶಾಲು ಹೊದಿಸಿ, ಸ್ಮರಣಿಕೆ  ಪುಷ್ಪಗುಚ್ಛಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರೆಲ್ಲರನ್ನೂ ಸನ್ಮಾನಿಸಲಾಯಿತು. ಕೃತಿ ಬಿಡುಗಡೆ ಕಾರ್ಯಕ್ರಮವನ್ನು ವಾಚನಾಲಯ ವಿಭಾಗದ ಕಾರ್ಯದರ್ಶಿ ವಸಂತ ಸುವರ್ಣ ಅವರು ನಿರೂಪಿಸಿ ವಂದಿಸಿದರು. ತುಂಬಿದ ಸಭಾಂಗಣದಲ್ಲಿ ಮುಂಬೈಯ ಗಣ್ಯ ಸಾಹಿತಿಗಳು, ಕಲಾವಿದರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಂಬಯಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಡೊಂಬಿವಲಿ ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.