kallianpurdotcom: 15/09/23
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಆರ್‌ಬಿಐ), ಸೆ.೧೫: ಕಳೆದ ಸುಮಾರು ಎರಡುವರೆ ದಶಕಗಳಿಂದ ಜನಸೇವೆ ಹಾಗೂ ಸಮಾಜ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿರುವ ಗುಜರಾತ್ ಬಿಲ್ಲವರ ಸಂಘ ಇದೀಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಸಂಘದ ೨೫ವರ್ಷಗಳ ಉತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಬಹಳ ಉತ್ಸಾಹ ಸಂಭ್ರಮದೊಂದಿಗೆ ಆಚರಿಸಲಾಗುತ್ತಿದ್ದು, ಸಮಾಜೋತ್ಸವ, ಕ್ರೀಡೋತ್ಸವ, ಧಾರ್ಮಿಕ ಉತ್ಸವ ಮತ್ತು ರಜತೋತ್ಸವ ಸಮಾರೋಪ ಇತ್ಯಾದಿಗಳೊಂದಿಗೆ ೨೫ರ ವರ್ಷ ಸ್ಮರಣೀಯ ವರ್ಷವಾಗಿಸಿ ಆಚರಿಸಲಾಗುತ್ತಿದೆ. ಇದರ ಮೊದಲ ಕಾರ್ಯಕ್ರಮವಾಗಿ ಕ್ರೀಡೋತ್ಸವ ನಡೆಸಲಾಗುತ್ತಿದ್ದು ಕ್ರೀಡೆಯಿಂದ ಸಮಾಜದ ಐಕ್ಯತೆ ಸಾಧ್ಯ ಎಂದು ಗುಜರಾತ್ ಬಿಲ್ಲವರ ಸಂಘದ ಗೌರವ ಅಧ್ಯಕ್ಷ ದಯಾನಂದ ಬೋಂಟ್ರ ಬೆಳ್ಮಣ್ಣು (ಬರೋಡ) ತಿಳಿಸಿದರು.
ಕಳೆದ ಭಾನುವಾರ ಗುಜರಾತ್ ಅಂಕಲೇಶ್ವರದ ‘ಗಾರ್ಡನ್ ಸಿಟಿ’ ಕ್ರೀಡಾಂಗಣದಲ್ಲಿ ಜಿಬಿಎಸ್ ಉಪಾಧ್ಯಕ್ಷ ಹರೀಶ್ ಪೂಜಾರಿ ಅಂಕ್ಲೇಶ್ವರ್ ಸಾರಥ್ಯ ಹಾಗೂ ಅಧ್ಯಕ್ಷ ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಸೂರತ್) ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಜಿಬಿಎಸ್ ಕೀಡೋತ್ಸವ ಉದ್ಘಾಟಿಸಿ ದಯಾನಂದ ಬೋಂಟ್ರ ತಿಳಿಸಿದರು. ರಜತ ಜಯಂತಿಯ ೨ನೇ ಕಾರ್ಯಕ್ರಮವಾಗಿ ಇದೇ ಬರುವ ಅ.೦೧ನೇ ಆದಿತ್ಯವಾರ ಗುಜರಾತ್‌ನ ಬರೋಡಾ ಅಲ್ಕಾಪುರಾ ಇಲ್ಲಿನ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕ್ರತಿಕ ಸಭಾ ಭವನದಲ್ಲಿ ಧಾರ್ಮಿಕ ಉತ್ಸವ ನಡೆಯಲಿದ್ದು ಧರ್ಮಸ್ಥಳ ಅಲ್ಲಿನ ಕನ್ಯಾಡಿ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರು ಆಗಮಿಸಿ ಹರಸಲಿದ್ದಾರೆ ಎಂದರು.
ಜಿಬಿಎಸ್ ಮಾಜಿ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸೂರತ್, ಉಪಾಧ್ಯಕ್ಷ ಸದಾಶಿವ ಪೂಜಾರಿ, ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಕೋಶಾಧಿಕಾರಿ ಸುದೇಶ್ ವೈ.ಕೋಟಿಯಾನ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು ದೀಪ ಬೆಳಗಿಸಿ ಕ್ರೀಡೋತ್ಸವಕ್ಕೆ ಚಾಲನೆಯನ್ನಿತ್ತು ಶುಭಾರೈಸಿದರು.
ಕ್ರೀಡೋತ್ಸವದ ಅಂಗವಾಗಿ ಹಗ್ಗ ಜಗ್ಗಾಟ, ಥ್ರೋ ಬಾಲ್, ಓಟ, ಸಂಗೀತ ಕುರ್ಚಿ, ಲೆಮನ್ ಸ್ಪೂನ್ ರೇಸ್ ಮುಂತಾದ ಕ್ರೀಡೆಗಳು ನಡೆಸಲ್ಪಟ್ಟವು. ನೆರೆದ ಕ್ರೀಡಾಭಿಮಾನಿಗಳಿಗೆ ವಿಶೇಷವಾದ ಕ್ರಿಕೆಟ್ ಪಂದ್ಯಾಟ ಮನಾಕರ್ಷಕವಾಗಿಸಿತು. ಪುಟಾಣಿಗಳಿಂದ ಹಿರಿಯ ವಯೋವೃದ್ಧರೂ ಪಾಲ್ಗೊಂಡಿದ್ದ ಕ್ರೀಡಾಕೂಟವು ಸಂಭ್ರಮಪೂರ್ವಕ ಕಾರ್ಯಕ್ರಮವಾಗಿ ಮೂಡಿ ವ್ಯವಸ್ಥಿತವಾಗಿ ಸುಂದರರೀತಿಯಿಂದ ಯಶಸ್ವಿಯಾಗಿತ್ತು.
ಕೊನೆಯಲ್ಲಿ ನಡೆಸಲ್ಪಟ್ಟ ಕ್ರೀಡಾ ಸಮಾಪನದಲ್ಲಿ ಗೌರವ ಅತಿಥಿಗಳಾಗಿ ತುಳು ಸಂಘ ಅಂಕಲೇಶ್ವರ ಗೌರವಾಧ್ಯಕ್ಷ ರವಿನಾಥ ಶೆಟ್ಟಿ, ಅಧ್ಯಕ್ಷ ಶಂಕರ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಗುಜರಾತ್ ರಾಜ್ಯ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ ಅಂಕಲೇಶ್ವರ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.
ಸಂಘದ ಉಪಾಧ್ಯಕ್ಷ ಯುವ ಚತುರ, ಕ್ರೀಯಾತ್ಮಕ ಸಂಘಟಕ, ಹರೀಶ ಪೂಜಾರಿ ಮಡ್ಯಾರ್ (ಅಂಕಲೇಶ್ವರ) ಮತ್ತು ಶೋಭಾ ಹರೀಶ್ ದಂಪತಿಯ ಅಪಾರ ಶ್ರಮ ಮತ್ತು ಮುತುವರ್ಜಿಯಲ್ಲಿ ಶಿಸ್ತುಬದ್ಧವಾಗಿ ನಡೆಸಲ್ಪಟ್ಟ ಕ್ರೀಡೋತ್ಸವಕ್ಕೆ ಅಹ್ಮದಾಬಾದ್‌ನ ಸುಮನ್ ಕೊಡಿಯಾಲ್‌ಬೈಲ್, ಹರೀಶ ಮೋಹನ ಪೂಜಾರಿ, ವಸಂತ ಕುಂದರ್, ಬರೋಡಾ ಇಲ್ಲಿನ ರವಿ ಸಾಲಿಯಾನ್, ರೋಹಿದಾಸ ಪೂಜಾರಿ, ಸರಿತಾ ಪೂಜಾರಿ, ನಂದಿನಿ ಸುವರ್ಣ, ಜ್ಯೋತಿ ಕೋಟಿಯಾನ್, ಸೂರತ್‌ನ ಪ್ರಭಾಕರ ಪೂಜಾರಿ, ವಾಪಿ ಇಲ್ಲಿನ ವೆಂಕಟೇಶ್ ಪೂಜಾರಿ ಸಿಲ್ವಾಸ, ಚಂದ್ರಿಕಾ ಕೋಟಿಯಾನ್, ಸದಾಶಿವ ಪೂಜಾರಿ, ರಮೇಶ ಪೂಜಾರಿ, ಅಶೋಕ ಕೋಟಿಯಾನ್ ಮೊದಲಾದವರು ಸಾಥ್ ನೀಡಿ ವ್ಯವಸ್ಥಿತವಾಗಿ ಸ್ಪರ್ಧೆಗಳನ್ನು ನಡೆಸಿದರು.
ಜಿಬಿಎಸ್‌ನ ಅಹ್ಮದಾಬಾದ್, ಬರೋಡ, ಸೂರತ್, ವಾಪಿ, ಅಂಕಲೇಶ್ವರ ಸೇರಿದಂತೆ ಎಲ್ಲಾ ಶಾಖೆಗಳ ನೂರಾರು ಬಂಧುಗಳು, ಸದಸ್ಯರು ಪಾಲ್ಗೊಂಡಿದ್ದು ಮನೋಜ್ ಸಿ.ಪೂಜಾರಿ ಪ್ರಾರ್ಥನೆ ಹಾಡಿದರು. ಸೌಮ್ಯ ಪೂಜಾರಿ ಸೂರತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೇವತಿ ಪೂಜಾರಿ ಬರೋಡ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.