Skip to main content
www.kallianpur.com | Email : kallianpur7@gmail.com | Mob : 9741001849

ಮುಂಬಯಿಯ ಹಿರಿಯ ರಂಗನಟ, ಸಾಹಿತಿ `ಶಿಮುಂಜೆ ಪರಾರಿ’ ಅವರಿಗೆ ೨೦೨೩ರ ಐಲೇಸಾ `ವಯೋಸಮ್ಮಾನ್’ ಗೌರವ

By July 22, 2023Kannada News
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಜು.೨೯: ಮುಂಬಯಿ ಸಾರಸ್ವತ ಲೋಕದ ಸಜ್ಜನ ಸಾಹಿತಿ, ಅಜಾತಶತ್ರು `ಶಿಮುಂಜೆ ಪರಾರಿ’ ಎಂಬ ಕಾವ್ಯ ನಾಮದಿಂದ ಪ್ರಸಿದ್ಧಿಯಾದ ತುಳು ಕನ್ನಡ ಕವಿ, ಅನುವಾದಕಾರ, ನಾಟಕಕಾರ, ಅಧ್ಯಾಪಕ ಕಂಠದಾನ ಕಲಾವಿದ ಮತ್ತು ನಟ ಎಂದೆಣಿಸಿ ಬಹುಮುಖ ಪ್ರತಿಭೆಗಳಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಶಿಮುಂಜೆ ಪರಾರಿ (ಸೀತಾರಾಮ ಮುದ್ದಣ್ಣ ಶೆಟ್ಟಿ) ಅವರನ್ನು ೨೦೨೩ನೇ ಸಾಲಿನ ಸಾರಿಯ ವಯೋ ಸಮ್ಮಾನದ ಗೌರವಕ್ಕೆ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಸಂಸ್ಥೆ ಆಯ್ಕೆ ಮಾಡಿದೆ.

ಐಲೇಸಾ ಅಂತಾರಾಷ್ಟ್ರೀಯ ಡಿಜಿಟಲ್ ಸಂಸ್ಥೆ ಬೆಂಗಳೂರು ತನ್ನ ಸ್ಥಾಪನೆಯ ಮೂರನೆ ವರ್ಷವನ್ನು ಇದೇ ಆಗಸ್ಟ್ ತಿಂಗಳಲ್ಲಿ  ಪೂರ್ಣಗೊಳಿಸಲಿದ್ದು ಆ ಪ್ರಯುಕ್ತ ಈ ವಯೋ ಸಮ್ಮಾನ ಗೌರವವನ್ನು ಶಿಮುಂಜೆ ಪರಾರಿ ಅವರಿಗೆ ಜು.೨೯ನೇ ಶನಿವಾರ ಸಲ್ಲಿಸಿ ವಿಭಿನ್ನ ಮತ್ತು ಅರ್ಥಪೂರ್ಣವಾಗಿ ಆಚರಿಸಲಿದೆ.

ಖ್ಯಾತ ಹಿನ್ನಲೆ ಗಾಯಕ ರಮೇಶ್ಚಂದ್ರ ಅವರ ಸಾರಥ್ಯದ ಐಲೇಸಾ ಸಂಸ್ಥೆಯ ವಯೋಸಮ್ಮಾನ್ ಗೌರವ ಸಮಿತಿಯು ಅನಂತ್ ರಾವ್  ನೇತೃತ್ವದಲ್ಲಿ ಮುಂಬಯಿಯ ಸಾಹಿತಿ ಪೇತ್ರಿ ವಿಶ್ವನಾಥ್ ಶೆಟ್ಟಿ ಅವರ ಸಹಕಾರದೊಂದಿಗೆ, ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ.

ಕವಿಯ ಬಂಧು, ಅಭಿಮಾನಿಗಳು ಮತ್ತು ಶಿಷ್ಯವೃಂದ ಸೇರಿ ಕಂಟ್ರಿ ಕ್ಲಬ್ ಅಂಧೇರಿ ಪಶ್ಚಿಮ ಇಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಸರಳವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಕವಿಯ ಸಾಹಿತ್ಯ ವಾಚನ, ವಿಮರ್ಶೆ ಮತ್ತು ಶಿಮುಂಜೆ ಅವರ ಇಷ್ಟದ ತಿನಸು ಮತ್ತು ಉಡುಗೊರೆಗಳನ್ನು ಅರ್ಪಿಸಿ, ಹಾಡುಗಳನ್ನು ಕವಿಯ ಸಮ್ಮುಖದಲ್ಲಿ ಹಾಡಿ, ಎಂಬತ್ತನಾಲ್ಕು ವರ್ಷ ಹರೆಯದ ವಯೋಸಾಧನೆಯ ನೆನಪಿಗೆ ರೂ. ೮೪,೦೦೦ ಗೌರವ ಗುರುದಕ್ಷಿಣೆಯೊಂದಿಗೆ ಈ ವಯೋಸಮ್ಮಾನವನ್ನು ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರು ಪ್ರದಾನ ಮಾಡಲಿದ್ದು, ಅಬುಧಾಬಿಯ ಸರ್ವೋತ್ತಮ ಶೆಟ್ಟಿ, ಕತಾರ್‌ನ ರವಿ ಶೆಟ್ಟಿ ಮೂಡಂಬೈಲು ಮತ್ತು ಮಂಗಳೂರಿನ ಯುವ ಲೇಖಕಿ ಅಕ್ಷತಾರಾಜ್ ಪೆರ್ಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಐ-ಲೇಸಾದ ಮುಂಬಯಿ ಸಂಚಾಲಕ ಸುರೇಂದ್ರ ಮಾರ್ನಾಡು ತಿಳಿಸಿದ್ದಾರೆ.

ಶಿಮುಂಜೆ ಪರಾರಿ:
ಸಜ್ಜನ ಸಾಹಿತಿಯೆಂದು ಖ್ಯಾತರಾದ ಸೀತಾರಾಮ ಮುದ್ದಣ್ಣ ಶೆಟ್ಟಿ `ಶಿಮುಂಜೆ ಪರಾರಿ’ ಕಾವ್ಯನಾಮ ದಿಂದ ಜನಮಾನಸದಲ್ಲಿ ನೆಲೆ ನಿಂತವರು. ೧೫.೦೯.೧೯೪೦ ರಂದು ಮುಲ್ಕಿಯ ಕಕ್ವ ಗ್ರಾಮ ಅತಿಕಾರಿಬೆಟ್ಟು ಇಲ್ಲಿ ಕಲ್ಯಾಣಿ ಶೆಟ್ಟಿ ಮತ್ತು ಶಿಮುಂಜೆ ಮುದ್ದಣ್ಣ ಶೆಟ್ಟಿ ದಂಪತಿಗಳ  ಸುಪುತ್ರನಾಗಿ ಜನಿಸಿದ ಶಿಮುಂಜೆ ಪರಾರಿ ಅವರಿಗೆ ಈಗ ೮೪ರ ಸಾರ್ಥಕ ತುಂಬು ಹರೆಯ. ಪತ್ನಿ ಚಂದ್ರಿಕಾ ಶೆಟ್ಟಿ, ಮಕ್ಕಳಾದ ಅರ್ಚನಾ ಮತ್ತು ಅಪರ್ಣಾ ಜೊತೆ ಮುಂಬಯಿಯಲ್ಲಿ ವಾಸವಿರುವರು. ಬಾಲ್ಯದಲ್ಲಿಯೆ ಓದುವಿಕೆಯ ಹವ್ಯಾಸ ಬೆಳೆಸಿಕೊಂಡ ಶಿಮುಂಜೆ ಅವರಿಗೆ ಮರಾಠಿ ಗುಜರಾತಿ ಮತ್ತು ಹಿಂದಿ ಭಾಷೆಗಳಲ್ಲಿ ತಾನು ಓದಿದ ಉತ್ತಮ ಸಾಹಿತ್ಯಗಳನ್ನು ತನ್ನ ಭಾಷೆಯ ಜನರೊಂದಿಗೆ ಹಂಚಿ ಸಂತೋಷಿಸುವ ಮಹದಾಸೆ. ಈ ಕಾರಣಕ್ಕಾಗಿ ಅನುವಾದ ಸಾಹಿತ್ಯ ಕ್ಷೇತ್ರದಲ್ಲಿ ಅನಿವಾರ್ಯವಾಗಿ ತೊಡಗಿ ಕೊಂಡವರು. ಮರಾಠಿಯ ನಾಟಕಗಳನ್ನು ತುಳು ಮತ್ತು ಕನ್ನಡಕ್ಕೆ ಅನುವಾದಿಸಿ ಮತ್ತು ವೇದಿಕೆಯಲ್ಲಿ ಪ್ರದರ್ಶಿಸಿ, ನಟಿಸಿ ಸೈಅನಿಸಿಕೊಂಡವರು.

ಶಿಮುಂಜೆ ಪರಾರಿ `ಯಾನ್ ಪಿನಯೆ’, `ಅವುಲೊರ್ತಿ ಮೂಲೊರ್ತಿ’, `ಜೋಕುಲು ಬಾಲೆಲು’ ಇಂತಹ ಸದಭಿರುಚಿಯ ಮರಾಠಿ ನಾಟಕಗಳನ್ನು ತುಳುವಿಗೆ ತಂದು ತಾನೂ ನಟಿಸಿ ಅವುಗಳಿಗೆ ಜೀವ ತುಂಬಿದವರು. ನವ ಪ್ರಭಾತ, ಯಾರು ನನ್ನವರು, ಸೂತ್ರ, ಸುಳಿ, ಯಾರಿಗೂ ಹೇಳೋಣು ಬ್ಯಾಡ ಮರಾಠಿಯಿಂದ ಕನ್ನಡಕ್ಕೆ ಅನುವಾದವಾದ ನಾಟಕಗಳಾದರೆ ನರ ಭಕ್ಷಕ ಹಿಂದಿಯಿಂದ ಕನ್ನಡಕ್ಕೆ ತರ್ಜುಮೆಯಾದ ಕಾದಂಬರಿ. ಮುಂಬಯಿ ನಗರದಲ್ಲಿದ್ದು ಕೊಂಡು ಶಿಮುಂಜೆಯವರು ತುಳು ಸಾಹಿತ್ಯಕ್ಕೆನೀಡಿದ ಕೊಡುಗೆ ಅಪಾರ. ತುಳು ಭಾಷೆಯನ್ನು ಕನ್ನಡದಲ್ಲಿ ಬರೆದು ಓದುವುದು ಕಷ್ಟ ಎನ್ನುವ ಮನಸ್ಥಿತಿಯಿಂದ ತುಳುವರನ್ನು ಹೊರ ತರಲು `ಯಾನ್ ಪನ್ಪಿನಿ ಇಂಚ’ ಎನ್ನುವ ತುಳು ಚುಟುಕು ಗಳನ್ನು ನೂರರ ಲೆಕ್ಕದಲ್ಲಿ ಮೂರು ಸಾವಿರ ಪ್ರತಿಗಳಲ್ಲಿ ಒಟ್ಟು ೩೦ಸಾವಿರ ಚುಟುಕುಗಳನ್ನು ಮನೆ ಮನೆಗೆ ಉಚಿತವಾಗಿ ಹಂಚಿ ತುಳು ಭಾಷಾ ಪ್ರೇಮ ಮೆರೆದವರು. ನಿತ್ಯಾನಂದರ ಸಂಪರ್ಕದಿಂದ ಆಧ್ಯಾತ್ಮದ ಒಲವಿನ, ಪಕ್ವ ಮನಸ್ಸಿನ ೧೦೮ ವಚನ ಮುಕ್ತಕಗಳನ್ನು `ನಿತ್ಯ ಆನಂದ  ವಚನ’ ಹೆಸರಿನಲ್ಲಿ ಅಚ್ಚಿಸಿ ಗುರು ನಿತ್ಯಾನಂದರಿಗರ್ಪಿಸಿ ಜೀವನ ಸಾರ್ಥಕ್ಯ ಕಂಡವರು. ಬರವಣಿಗೆಯ ಜೊತೆಗೆ ನಟನೆಯ ಹವ್ಯಾಸ ಬೆಳಿಸಿಕೊಂಡ ಶಿಮುಂಜೆ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡು ಸುಂದರ ನಾಥ ಸುವರ್ಣ ಅವರ `ಗುಡ್ಡದ ಭೂತ’ ಗಿರೀಶ್ ಕಾಸರವಳ್ಳಿ ನಿರ್ದೇಶನದ `ಘಟ ಶ್ರಾದ್ಧ’ಗಳಲ್ಲಿ ನಟಿಸಿ ಹೆಸರಾದವರು. ಹಲವಾರು ಸಂಘ ಸಂಸ್ಥೆಗಳ ಗೌರವ ಮತ್ತು ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಡಾ| ಪೂರ್ಣಿಮಾ ಶೆಟ್ಟಿ ಅವರ ಸಂಪಾದಕತ್ವದಲ್ಲಿ `ಸಂಪ್ರೀತಿ’ ಗ್ರಂಥ ಗೌರವ ಹಾಗೂ ೧೯೯೯-೨೦೦೦ ಸಾಲಿನಲ್ಲಿ `ಜೋಕುಲು ಬಾಲೆಲು’ ಕೃತಿಗೆ ತುಳು ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ ಇವರ ಸಾಧನಾ ಕಿರೀಟದಲ್ಲಿ ಸೇರಿಕೊಂಡ ಹಿರಿಮೆಗಳು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.