Skip to main content

ಹೆಸರಾಂತ ಸಾಹಿತಿ, ಕಾದಂಬರಿಕಾರ, ವಿಜ್ಞಾನಿ, ಪತ್ರಕರ್ತ ಡಾ| ವ್ಯಾಸರಾಯ ನಿಂಜೂರು ನಿಧನ.

By November 4, 2026Mumbai News
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್) 

 ಮುಂಬಯಿ, ನ.03: ಉಡುಪಿಯಲ್ಲಿ ಸಾಹಿತ್ಯಾಸಕ್ತರ ಹೃದಯಗೆದ್ದ ಮುಂಬಯಿ ಕನ್ನಡಿಗರ ಹೃದಯ ಸಾಮ್ರಾಟ ಪ್ರಸಿದ್ಧ ನಾಡಿನ ಶ್ರೇಷ್ಠ ವಿಜ್ಞಾನಿ, ಸಂಶೋಧಕ, ಪ್ರಸಿದ್ಧ ಸಾಹಿತಿ, ಕಾದಂಬರಿಕಾರ, ನಾಟಕಕಾರ, ಹಿರಿಯ ಪತ್ರಕರ್ತ, ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್‌ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ-ಗೋಕುಲ) ಇದರ ಗೋಕುಲವಾಣಿ ಮುಖವಾಣಿಯ (ವಿಶ್ರಾಂತ) ಗೌರವ ಸಂಪಾದಕ ಡಾ| ವ್ಯಾಸರಾವ್ ನಿಂಜೂರ್ (86.) ಇಂದಿಲ್ಲಿ ಮಂಗಳವಾರ ಮುಂಜಾನೆ ಬೃಹನ್ಮುಂಬಯಿ ಇಲ್ಲಿನ ಚೆಂಬೂರು ದೇವ್‌ನಾರ್‌ನಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃದು ಮಧುರ ಮಾತು, ಮಂದಸ್ಮಿತ ಮುಖಭಾವ ಹಾಗೂ ಸರಳ ಸಜ್ಜನಿಕೆಗಳಿಂದ ಸರ್ವರಿಗೂ ಆಪ್ತರಾಗಿರುವ ತಾವು ಮುಂಬಯಿ ಕನ್ನಡಿ ಗರ ಆತ್ಮೀಯ ಬಂಧುವಾಗಿದ್ದ ಮೃತರು ಸುಪುತ್ರ, ಸುಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ, ಸಾಹಿತ್ಯ ಲೋಕವನ್ನು ಆಗಲಿದ್ದಾರೆ.

ನಿಂಜೂರು ನಿಧನಕ್ಕೆ ಕಲ್ಕೂರ ಫೌಂಡೇಶನ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ,  ಕನ್ನಡ ಸಾಹಿತ್ಯ ಪರಿಷತ್ತ್‌ನ ಮಾಜಿ ಅಧ್ಯಕ್ಷ ಡಾ| ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ  ಅಧ್ಯಕ್ಷ ಪ್ರೊ| ಎಂ.ಪಿ.ಶ್ರೀನಾಥ್, ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಬಿಎಸ್‌ಕೆಬಿ ಅಸೋಸಿಯೇಶನ್‌ನ ನಿಕಟಪೂರ್ವ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು,  ಅಧ್ಯಕ್ಷೆ ಶೈಲಿನಿ ಎ.ರಾವ್, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ಮಾಜಿ ಟ್ರಸ್ಟಿ ಬಡನಿಡಿಯೂರು ರಮಾನಂದ ರಾವ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ನಿಕಟಪೂರ್ವ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಗೌರವ ಸಂಪಾದಕ ಶ್ರೀನಿವಾಸ ಜೋಕಟ್ಟೆ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ವಾಮನ ಹೊಳ್ಳ, ಬಿ.ಆರ್ ಮಧುಸೂದನ್, ಮೋಹನ್ ಮಾರ್ನಾಡ್, ಡಾ| ಭರತ್‌ಕುಮಾರ್ ಪೊಲಿಪು ಸೇರಿದಂತೆ ರಾಷ್ಟ್ರದಾದ್ಯಂತದ ಹಲವಾರು ಸಂಘ ಸಂಸ್ಥೆಗಳ ಮುಖ್ಯಸ್ಥರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಡಾ| ವ್ಯಾಸರಾಯ ನಿಂಜೂರು:
ಉಡುಪಿ ತೆಂಕ ನಿಡಿಯೂರು ಅಲ್ಲಿನ ಪರಮ ಸಾತ್ವಿಕರಾದ ಸೀತಮ್ಮ ಮತ್ತು ಶ್ರೀನಿವಾಸ ರಾವ್ ನಿಂಜೂರು ದಂಪತಿ ಸುಪುತ್ರನಾಗಿದ್ದು, ತೆಂಕನಿಡಿಯೂರಿನಲ್ಲಿ ಬಾಲ್ಯವನ್ನು ಕಳೆದು ಸ್ಥಾನೀಯ ಮುಟ್ಟದ ಕಾವು ಶಾಲೆಯಲ್ಲಿ ಪ್ರಾಥಮಿಕ, ಕಲ್ಯಾಣ್ಫುರದ ಮಿಲಾಗ್ರಿಸ್ ಶಾಲೆಯಲ್ಲಿ ಪ್ರೌಢಶಾಲೆ,  ಎಂಜಿಎಂ ಕಾಲೇಜ್ ಉಡುಪಿಯಲ್ಲಿ ವಿಜ್ಞಾನದಲ್ಲಿ ಪದವೀಧರರಾಗಿದ್ದರು.

ವಿದ್ಯಾಥಿ ದೆಸೆಯಲ್ಲೇ ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತು ಆಸಕ್ತಿ, ಅಭಿರುಚಿಯನ್ನು ಬೆಳೆಸಿಕೊಂಡಿದ್ದು,  ನಾಲ್ಕು ವರ್ಷ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ನಲ್ಲಿ ವೈದ್ಯಕೀಯ ವಿದ್ಯಾಥಿಗಳಿಗೆ ಟ್ಯೂಟರ್ ಆಗಿ ಸೇವೆ ಸಲ್ಲಿಸಿದ್ದರು. ೧೯೬೩ರಲ್ಲಿ ಮೊದಲ ಕಥಾ ಸಂಕಲನ “ಕುಂಕುಮ”  ಪ್ರಕಟಿಸಿ ಅಧಿಕೃತವಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣ ಮಾಡಿದ್ದರು.

ವಿಜ್ಞಾನದಲ್ಲಿ ಜೀವರಸಾಯನ ಮತ್ತು ಆಹಾರ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿಧರನಾಗಿದ್ದ ಇವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್‌ಡಿ. (ಡಾಕ್ಟರೇಟ್) ಪದವಿಧಾರರಾಗಿದ್ದು, ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದು, ಇವರ ಮಾರ್ಗದರ್ಶನದಲ್ಲಿ ಸುಮಾರು ಏಳೆಂಟು ವಿದ್ಯಾಥಿಗಳು ಸಂಶೋಧನೆ ನಡೆಸಿ ಪಿ.ಎಚ್‌ಡಿ. ಪದವಿ ಗಳಿಸಿಸಿದ್ದರು. ೧೯೬೫ರಲ್ಲಿ ಮುಂಬಯಿ ಮಹಾನಗರಿ ಸೇರಿ ವಿಶ್ವ ವಿಖ್ಯಾತ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ (ಬಿಎಆರ್‌ಸಿ) ವೈಜ್ಞಾನಿಕ ಅಧಿಕಾರಿ ಆಗಿದ್ದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರಮಿಸಿದ್ದರು. ಬಿಎಆರ್‌ಸಿನಲ್ಲಿ ಜೀವರಸಾಯನ ಮತ್ತು ಆಹಾರ ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧಕರಾಗಿ, ಸುದೀರ್ಘಕಾಲ ದುಡಿದು ನಿವೃತ್ತರಾಗಿದ್ದರು. ಕಥಾ ಲೇಖಕರಾಗಿ ಸಾಹಿತ್ಯ ಲೋಕದಲ್ಲಿ ಹೆಜ್ಜೆಯೂರಿ ಕಾದಂಬರಿಕಾರರಾಗಿ, ನಾಟಕಕಾರರಾಗಿ, ಸಮರ್ಥ ಸಂಪಾದಕರಾಗಿ ಪ್ರಸಿದ್ಧರಾಗಿದ್ದರು.

‘ಕುಂಕುಮ’ ದಿಂದ ಆರಂಭವಾದ ಬರಹಗಳು ಕ್ರಮೇಣ ‘ಮಂಚ’ ಕಥಾ ಸಂಕಲನದಲ್ಲಿ ಪರಿಪಕತೆಯ ಸೀಮೋಲ್ಲಂಘನೆ ಮಾಡಿತ್ತು.‘ದೂಜ ಮಾಸ್ತರರ ಮಗಳು ಬಸಿರಾದುದು’ ಇತ್ಯಾದಿ ಪ್ರಸಿದ್ಧ ಕಥಾ ಸಂಕಲನಗಳು. ‘ಉಸಿರು’ ಕಾದಂಬರಿಯನ್ನು ಪ್ರಸಿದ್ಧ್ದ ಹಿಂದಿ ಲೇಖಕ ಕಮಲೇಶ್ವರ್ ಗೌರವಿಸಿದ್ದರು. ಉಸಿರು ಕಾದಂಬರಿ ಕನ್ನಡ ಸಾಹಿತ್ಯ ಪರಿಷತ್ತ್‌ನಿಂದ ಪುನ:ರ್‌ಮುದ್ರಣಗೊಂಡಿದ್ದು, ಮುಂಬಯಿ ಆಕಾಶವಾಣಿ ಗಾಗಿ ಬರೆದ ‘ಸೌಖ್ಯವಿಲ್ಲ’, ‘ಆರಣ್ಯಕ್ಕೊಬ್ಬ ಅರಸು’, ‘ಪ್ರೇಮಾಂತರಿಕ್ಷ’ ಮೊದಲಾದ ಕಿರುನಾಟಕಗಳು ಶೋತೃಗಳಿಂದ ಅಪಾರ ಮೆಚ್ಚುಗೆ ಗಳಿಸಿವೆ. ಕನ್ನಡ ರಂಗಭೂಮಿಯಲ್ಲಿ ಬಣ್ಣ ಹಚ್ಚಿ ರಂಗಮಂಟದಲ್ಲಿ ಮಿಂಚಿದ ಅವರು ಪ್ರಸಿದ್ಧ ನಾಟಕಗಳನ್ನೂ ಬರೆದಿರುವರು. ಯಕ್ಷಗಾನ ವೇಷಧಾರಿ ಆಗಿದ್ದು, ಯಕ್ಷಗಾನ ಭಾಗವತಿಕೆಯ ಮಟ್ಟು ಹಾಗೂ ಹೆಜ್ಜೆ ಕುಣಿತಗಳನ್ನು ಶಾಸ್ತೋಕ್ತವಾಗಿ ಪರಿಣತರಾಗಿದ್ದು ಪ್ರಸಿದ್ಧ ರಂಗಕೃತಿ ‘ನಲ್ವತ್ತರ ನಲುಗು’ ಅನೇಕ ಪ್ರದರ್ಶನಗಳನ್ನು ಕಂಡಿವೆ.

ಮರಾಠಿಗರ ಕಾಲನಿರ್ಣಯ ಕ್ಯಾಲೆಂಡರನ್ನು ಪ್ರತಿವರ್ಷವೂ ಆಚ್ಚುಕಟ್ಟಾಗಿ ಕನ್ನಡದಲ್ಲಿ ತರುತ್ತಿದ್ದರು. ೮೨ಕ್ಕೂ ಮಿಕ್ಕಿದ ಸಂಶೋಧನಾ ಲೇಖನಗಳನ್ನು ದೇಶ ವಿದೇಶಗಳ ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಪಡಿಸಿದ್ದ ಇವರು ಕಳೆದ ಸುಮಾರು ಮೂರು ದಶಕಗಳಿಂದ ‘ಗೋಕುಲ’ ಪತ್ರಿಕೆಯ ಸ್ಥಾಪಕ ಸಂಪಾದಕ ಆಗಿ ಸಮರ್ಪಕವಾಗಿ ಹೊರತರುತ್ತಾ ಸರ್ವರ ಶ್ಲಾಘನೆಗೆ ಪಾತ್ರರಾಗಿದ್ದರು.

ಅವರ ‘ನಲ್ವತ್ತರ ನಲುಗು’ ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ‘ಚಾಮುಂಡೇಶ್ವರಿ ಭವನ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ವರ್ಧಮಾನ ಪ್ರಶಸ್ತಿ ದೊರೆತಿವೆ.  ಮೂಡಬಿದ್ರಿಯಲ್ಲಿ ಜರಗಿದ ೭೧ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಶ್ರೀ’ ಪ್ರಶಸ್ತಿ, ಶ್ರೀಮತಿ ಜಯಂತಿ ಬಿ.ಎಸ್ ಕುರ್ಕಾಲ್ ಸಾಹಿತ್ಯ ಪ್ರಶಸ್ತಿ-೨೦೦೬ ಲಭಿಸಿದ್ದು, ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದರು. ೭೦ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್ ಸಂಸ್ಥೆಯ ‘ಗೋಕುಲ ರತ್ನ’ ಪ್ರಶಸ್ತಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸದಸ್ಯರಾಗಿದ್ದು, ಚೆಂಬೂರು ಕರ್ನಾಟಕ ಸಂಘ ಸಾಹಿತ್ಯ ಸಹವಾಸ ೨೦೦೭ರ ಸಮಾರಂಭದಲ್ಲಿ ಸನ್ಮಾನಿಸಲ್ಪಟ್ಟಿದ್ದರು.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.