kallianpurdotcom: 26/09/23
(ಚಿತ್ರ /ವರದಿ : ತಾರ ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.೨೫: ಧ್ಯೇಯೋದ್ದೇಶಗಳು ಚೆನ್ನಾಗಿದ್ದರೆ ಸಂಘಸಂಸ್ಥೆಗಳು ಶಾಸ್ವತವಾಗಿ ಉಳಿಯುತ್ತವೆ. ಸಂಸ್ಥೆಯ ಸ್ಥಿರತೆಗೆ ತಾಳ್ಮೆಯೇ ಪ್ರಧಾನವಾದುದು. ಕಪಸಮ ಶತಾಯುಷ್ಯವಾಗಿ ಬೆಳೆಯಲಿ ಎಂದು ಹಾರೈಸುವೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಸಲಹಾ ಸಮಿತಿ ಸದಸ್ಯ ನ್ಯಾಯವಾದಿ ಬಿ.ಮೋಹಿದ್ಧೀನ್ ಮುಂಡ್ಕೂರು ತಿಳಿಸಿದರು.
ಕಳೆದ ಭಾನುವಾರ ಸಂಜೆ ಮಂಗಳೂರು ಹೊಯಿಗೆಬೈಲ್ ಇಲ್ಲಿನ ರತ್ನಾ ನಿವಾಸದಲ್ಲಿ ಕಪಸಮ ಸಂಘದ ಸಲಹಾ ಸಮಿತಿಯ ಹಿರಿಯ ಸದಸ್ಯೆ, ಮಹಾರಾಷ್ಟ್ರ ಸರಕಾರದ ಸಾರ್ವಜನಿಕ ಅಭಿಯೋಕ್ತಿ, ಮುಂಬಯಿಯ ಹೈಕೋರ್ಟ್ ನ್ಯಾಯವಾದಿ ರೋಹಿಣಿ ಜೆ.ಸಾಲಿಯಾನ್ ರಚಿತ ದಿವ್ಯಾಂಗನೆ ಕವನ ಸಂಕಲನವನ್ನು ಬಿಡುಗಡೆ ಗೊಳಿಸಿ ನ್ಯಾ| ಸಾಲಿಯಾನ್ ಅವರಿಗೆ ಕೃತಿ ಅರ್ಪಿಸಿ ಗೌರವಿಸಿ ನ್ಯಾಯವಾದಿ ಮುಂಡ್ಕೂರು ಮಾತನಾಡಿದರು.
ರೋಹಿಣಿ ಸಾಲಿಯಾನ್ ಮಾತನಾಡಿ ಒಳನಾಡು ಬಿಟ್ಟು ಹೊರನಾಡಲ್ಲಿ ಬೀಡು ಬಿಟ್ಟ ಮುಂಬಯಿ ಕನ್ನಡಿಗರ ಕನ್ನಡಾರಾಧನೆ ಸ್ತುತ್ಯಾರ್ಹ. ಬಹಳಷ್ಟು ಜನ ಬದುಕಿನೊಂದಿಗೆ ಕನ್ನಡದ ಅಭಿಮಾನ ತೋರಿಸಿ ಕನ್ನಡಾಂಭೆಯ ಆರಾಧನೆಗೈದ ಕಾರಣ ಇಲ್ಲಿನ ಕನ್ನಡ ಪತ್ರಿಕಾರಂಗ ಗಟ್ಟಿಯಾಗಿ ನೆಲೆನಿಂತಿದೆ. ಇವೆಲ್ಲವುಗಳ ಮಧ್ಯೆ ಕಪಸಮ ಸಂಸ್ಥೆ ಜನಸ್ನೇಹಿ ಸಂಸ್ಥೆಯಾಗಿ ನನ್ನನ್ನು ಸಾಹಿತಿ, ಕವಿ ಮಾಡುತ್ತಿರುವ ಪ್ರಯತ್ನ ಅಭಿವಂದನೀಯ. ಬರಹಗಾರರಿಗೆ ಸ್ಪೂರ್ತಿಯಾದ ಹಿರಿಕ್ಕ ಡಾ| ಸುನೀತಾ ಎಂ.ಶೆಟ್ಟಿ ಅವರ ಮುನ್ನುಡಿಯಿಂದ ಈ ಸಂಕಲನ ಮತ್ತಷ್ಟು ಮಹತ್ವ ಪಡೆದಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಮಾತನಾಡಿ ಕಪಸಮ ಸಂಸ್ಥೆಯ ಪಾಲಿಗೆ ಇದೊಂದು ಸುದಿನ. ನ್ಯಾ| ಸಾಲಿಯಾನ್ ಅವರು ಸಂಘಕ್ಕೆ ಶಕ್ತಿ ತುಂಬಿ ತಿದ್ದಿತೀಡಿ ಸಲಹಿದ ಕಾರಣ ಸಂಘವು ಬಲಿಷ್ಠವಾಗಿ ನಿಂತಿದೆ. ಧೀಮಂತ ವ್ಯಕ್ತಿತ್ವದ ಸಾಲಿಯಾನ್‌ರ ಕವನಗಳನ್ನು ಸಂಘವು ಪ್ರಕಾಶಿಸಿದ್ದು ಇದು ಸಂಘದ ಹಿರಿಮೆಯಾಗಿದೆ ಎಂದರು.
ಪತ್ರಕರ್ತರ ಸಂಘದ ಗೌ| ಪ್ರ| ಕಾರ್ಯದರ್ಶಿ ಸಾ.ದಯಾ (ದಯಾನಂದ್) ಕೃತಿಯ ಬಗ್ಗೆ ತಿಳಿಸಿ ಅಭಿನಂದನಾ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿ ಹದಿನೈದರ ಹೊಸ್ತಿಲಲ್ಲೇ ಕಪಸ ಮಹಾರಾಷ್ಟ್ರ ಮಹಾನ್ ಸಂಸ್ಥೆಯಾಗಿ ಸದೃಢಗೊಂಡಿದೆ. ನಾಡಿನ ಪ್ರಕೃತಿ ವಿಕೋಪದ ಸಂದಿಗ್ಧ ಕಾಲಕ್ಕೆ ಸ್ಪಂದಿಸಿದ ಪತ್ರಕರ್ತರ ಸಂಘದ ಸಾಹಿತಿಕ ಸೇವೆಯೂ ಅನುಪಮವಾಗಿದೆ ಎಂದರು.
ಉದ್ಯಮಿ ಸುರೇಶ್ ಕೋಟ್ಯಾನ್, ಮಮತಾ ಕೋಟ್ಯಾನ್ ಉಪಸ್ಥಿತರಿದ್ದು, ಸದಸ್ಯ ಅರೀಫ್ ಕಲ್ಕಟ್ಟಾ ಧನ್ಯವದಿಸಿದರು
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.