kallianpurdotcom: 05/10/23
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, (ಆರ್‌ಬಿಐ) ಅ.೦೪: ಉಜಿರೆ: ಭಕ್ತಿಗೆ ಮೂಲವೇ ಭಜನೆ. ನಮ್ಮ ದೇಶದ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಪರಂಪರೆಯಲ್ಲಿ ಭಜನೆ ಹಾಸುಹೊಕ್ಕಾಗಿದ್ದು ಶ್ರದ್ಧಾ- ಭಕ್ತಿಯ ಭಜನೆ ಮೂಲಕ ದೇವರ ಸಾಕ್ಷಾತ್ಕಾರವಾಗುತ್ತದೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.ಅವರು ಬುಧವಾರ ಧರ್ಮಸ್ಥಳದಲ್ಲಿ ಒಂದು ವಾರ ಕಾಲ ನಡೆದ ಭಜನಾ ತರಬೇತಿ ಕಮ್ಮಟದ ಸಮರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮಹಾರಾಷ್ಟ್ರದಲ್ಲಿ ಸಂತ ತುಕಾರಾಮ ಮೊದಲಾದ ಸಂತರು ಭಜನಾ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡಿದ್ದಾರೆ. ಭೌತಿಕ ಸುಖ-ಭೋಗಕ್ಕಿಂತ ಆಧ್ಯಾತ್ಮಿಕ ಬದುಕೇ ಶ್ರೇಷ್ಠವಾಗಿದ್ದು ಭಜನೆ ಮೂಲಕ ಸುಲಭದಲ್ಲಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಭಜನೆ ಮೂಲಕ ಧರ್ಮಜಾಗೃತಿಯಾಗಿ ನೈತಿಕಮೌಲ್ಯಗಳು ಉದ್ದೀಪನಗೊಂಡು ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳುತ್ತದೆ ಎಂದು ಸ್ವಾಮೀಜಿ ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಬಹುಮುಖಿ ಸಮಾಜ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದ ಸ್ವಾಮೀಜಿ, ಭಜನಾ ತರಬೇತಿ ಕಮ್ಮಟದ ಮೂಲಕ ಸಾಮೂಹಿಕ ಭಕ್ತಿ ಕ್ರಾಂತಿಯನ್ನೆ ಮಾಡಿದ್ದಾರೆ. ಅನ್ನದಾಸೋಹ, ಜ್ಞಾನದಾಸೋಹ, ಆರೋಗ್ಯ, ಶಿಕ್ಷಣ ಮತ್ತು ಗ್ರಾಮಾಭಿವೃದ್ಧಿ ಕ್ಷೇತ್ರದಲ್ಲಿ ಸೇವೆಯನ್ನು ಶ್ಲಾಘಿಸಿದ ಸ್ವಾಮೀಜಿ ಹೆಗ್ಗಡೆಯವರು ಧರ್ಮಸ್ಥಳಕ್ಕೆ ಮಾತ್ರವಲ್ಲ ಎಲ್ಲಾ ಮಠಾಧೀಶರುಗಳಿಗೂ ಧರ್ಮಾಧಿಕಾರಿ ಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಇಳೈಯರಾಜ ಶುಭಾಶಂಸನೆ ಮಾಡಿ, ಧರ್ಮಸ್ಥಳ ಕ್ಷೇತ್ರದ ಮಹಿಮೆ ಅದ್ಭುತವಾಗಿದ್ದು ಮಾತಿನಿಂದ ವರ್ಣಿಸಲು ಸಾಧ್ಯವಿಲ್ಲ. ಇಲ್ಲಿಗೆ ಬಂದು ತಾನು ಅತೀವ ಸಂತಸಪಟ್ಟಿದ್ದೇನೆ ಎಂದರು.
ಅವರು ಸುಶ್ರಾವ್ಯವಾಗಿ ಪದ್ಯ ಒಂದನ್ನು ಹಾಡಿ ಶ್ರೋತೃಗಳನ್ನು ರಂಜಿಸಿದರು. ತಾನು ಕೊಲ್ಲೂರಿನ ಪರಮ ಭಕ್ತನಾಗಿದ್ದು, ಇಲ್ಲಿ ಬಂದಾಗಲೂ ಅದೇ ರಾಗದ ಅದೇ ಹಾಡನ್ನು ಇಲ್ಲಿಯೂ ಹಾಡಲು ಅಭಿಮಾನ ಪಡುತ್ತೇನೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಭಜನೆಯಿಂದ ಸಾತ್ವಿಕ ಸಮಾಜ ನಿರ್ಮಾಣ ವಾಗುತ್ತದೆ. ಕಲಿಯುಗದಲ್ಲಿ ಭಜನೆ ಮಾಡುವುದರಿಂದ ಭಗವಂತ ನೊಂದಿಗೆ ನೇರವಾಗಿ ಅನುಸಂಧಾನ ಸಾಧ್ಯವಾಗುತ್ತದೆ ಎಂದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ ಭಜನಾ ತರಬೇತಿ ಮೂಲಕ ಹೆಗ್ಗಡೆಯವರು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ರೂವಾರಿಯಾಗಿದ್ದಾರೆ. ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ಹೆಗ್ಗಡೆಯವರು ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ನಾಯಕತ್ವ ಗುಣ ಬೆಳೆಸಿಕೊಂಡು ಆಯಾ ಊರಿನ ಪ್ರಗತಿಯ ರೂವಾರಿಗಳಾಗಬೇಕು. ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಪ್ರಜ್ಞಾವಂತ ನಾಗರಿಕರಾಗಿ, ಪ್ರಗತಿಶೀಲ ಚಿಂತನೆಯೊಂದಿಗೆ ಸಮಾಜದಲ್ಲಿ ಸುಖ-ಶಾಂತಿ, ಸಾಮರಸ್ಯ, ಸೌಹಾರ್ದತೆ ನೆಲೆಸುವಂತೆ ಮಾಡಬೇಕು. ದುಶ್ಚಟಮುಕ್ತ ಸಮಾಜ ರೂಪಿಸಿ, ಮಾನವೀಯತೆಯೊಂದಿಗೆ ಎಲ್ಲರ ಮನೆ ಮತ್ತು ಮನ ಬೆಳಗಲಿ ಎಂದು ಹೆಗ್ಗಡೆಯವರು ಹಾರೈಸಿದರು.
ಪುಲಿಯಾರು ಸಿದ್ಧಪ್ಪ ಅಯ್ಯಪ್ಪ ಸ್ವಾಮೀಜಿ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಇದ್ದರು. ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.
ಧರ್ಮಸ್ಥಳದ ವಿದುಷಿ ಕುಮಾರಿ ಚೈತ್ರಾ ಮತ್ತು ಬಳಗದವರ ನೃತ್ಯಭಜನೆ ಆಕರ್ಷಕವಾಗಿ ಮೂಡಿ ಬಂತು. ಭಜನಾ ತರಬೇತಿ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಶ್ರೀನಿವಾಸರಾವ್ ಧರ್ಮಸ್ಥಳ ಧನ್ಯವಾದವಿತ್ತರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.