Skip to main content
www.kallianpur.com | Email : kallianpur7@gmail.com | Mob : 9741001849

ಕೆ.ವಿ ರಾಘವೇಂದ್ರ ಐತಾಳ್ ಅವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ ೨೦೨೪.

By March 14, 2024Mumbai News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್) 

ಮುಂಬಯಿ (ಆರ್‌ಬಿಐ), ಮಾ.೧೩: ಮುಂಬಯಿ ಅಂದಾಗ ನಮಗೆ ಬರೀ ಬಿಡುವಿಲ್ಲದ ಜನಜಂಗುಳಿಯ ಓಡಾಟದ ಜೀವನದ ದೃಶ್ಯಗಳೇ ಕಾಣಸಿಗೋದು. ವಾರಕ್ಕೆ ಬರುವ ಒಂದು ಭಾನುವಾರ ಚಿಟಿಕೆ ಹೊಡೆದ ಹಾಗೆ ಹೋಗಿ ಬಿಡುತ್ತೆ. ಆದರೆ ಮುಂಬಯಿ ಕಲಾವಿದ ಕುಟುಂಬದವರು ಸಮಯವನ್ನು ಕಟ್ಟಿಕೊಳ್ಳಲು ನಿಸ್ಸೀಮರು. ಅದಕ್ಕೆ ಮುಂಬಯಿಯ ಎಲ್ಲಾ ಭಾಗಗಳಲ್ಲಿ ಒಂದೇ ಆದಿತ್ಯವಾರ ಬೇರೆಬೇರೆ ಕಡೆಗಳಲ್ಲಿ ನಾಟಕಗಳು ಪ್ರದರ್ಶನ ಗೊಳ್ಳುತ್ತವೆ.

ಮುಂಬಯಿನಲ್ಲಿ ನಾಟಕ ಕಲಾವಿದರಿಗೇನೂ ಕೊರತೆಯಿಲ್ಲ ಎಂದರೆ ಬಹುಶ: ತಪ್ಪಾಗಲಾರದು. ಹವ್ಯಾಸಿ ಕಲಾವಿದ ರಿಗೆ ಇಲ್ಲಿ ಅವಕಾಶಗಳು ವಿಪುಲವಾಗಿ ದೊರೆಯುವುದಕ್ಕೆ ಮುಖ್ಯ ಕಾರಣ ಇಲ್ಲಿನ ಸಂಘ ಸಂಸ್ಥೆಗಳು. ಕನ್ನಡ ಪರ ಸಂಸ್ಥೆಗಳು, ತುಳು ಸಂಘಗಳು, ಜಾತೀಯ ಸಂಸ್ಥೆಗಳು, ಚಿಣ್ಣರಬಿಂಬ ಮೊದಲಾದ ಸಂಘಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿವೆ. ಒಂದು ಸಮಯದಲ್ಲಿ ಮುಂಬಯಿ ಕಲಾವಿದರು ಮುಂಬಯಿಗೆ ಮಾತ್ರ ಸೀಮಿತರಾಗಿದ್ದರು. ಈಗ ಹಾಗಲ್ಲ. ಜನ್ಮಭೂಮಿ, ಕರ್ಮಭೂಮಿ ಮಾತ್ರವಲ್ಲ ವಿದೇಶಗಳಿಗೂ ಹೋಗಿ ಪ್ರದರ್ಶನ ಕೊಡುವಷ್ಟು ಪ್ರಬುದ್ಧತೆ, ಪಕ್ವತೆಯನ್ನು ಬೆಳೆಸಿಕೊಂಡಿದ್ದಾರೆ. ಹಾಗಾಗಿ ಮುಂಬಯಿ ಕಲಾವಿದರನ್ನು ಎಲ್ಲೆಡೆ ಗುರುತಿಸುವಂತಾಗಿದೆ. ಈ ಗುರಿತಿಸುವಿಕೆ ನಾಟಕ ಪ್ರದರ್ಶನಕ್ಕೆ ಮಾತ್ರವಲ್ಲ ಪ್ರಶಸ್ತಿ ಪುರ ಸ್ಕಾರವನ್ನೂ ನಮ್ಮವರನ್ನು ಹುಡುಕಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ.

ಅಂತವರಲ್ಲಿ ನಮ್ಮ ಕಲಾಭಾರತಿಯ ಹಿರಿಯ ಸದಸ್ಯರಾದ ಪ್ರಬುದ್ದ ನಟರಾದ ಕೆ.ವಿ ರಾಘವೇಂದ್ರ ಐತಾಳ್ ಅವರೂ ಒಬ್ಬರು. ಇವರು ಎಲ್ಲರ ನೆಚ್ಚಿನ ಐತಾಳ್ ಸರ್. ರಂಗದ ವಿಷಯದಲ್ಲಿ ಅತ್ಯುತ್ತಮ ನಟ. ಶಿಸ್ತು ಬದ್ಧ ಹಾಗೂ ತೀವ್ರ ರಂಗಬದ್ಧತೆ ಉಳ್ಳವರು. ಜೊತೆಗೆ ಮುಂಬಯಿಯ ಕನ್ನಡ ಸಂಘಗಳ ಮಾತೃಸಂಘ ಎನಿಸಿಕೊಂಡಿರುವ ಕರ್ನಾಟಕ ಸಂಘ ಮುಂಬಯಿ, ಗೋರೆಗಾವ್ ಕರ್ನಾಟಕ ಸಂಘ, ವೀರ ಕೇಸರಿ ಸಂಸ್ಥೆಯಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿ ಕೊಂಡವರು. ರ‍್ವತ್ತರ ಹರೆಯದ ಐತಾಳರು ಈಗಲೂ ಸದಾ ಪಾರದರ್ಶಕದಂತ ಚುರುಕಾಗಿ ಓಡಾಡ್ತಾ ಎಲ್ಲರನ್ನು ಒಟ್ಟುಗೂಡಿಸುತ್ತಾ ಇರುತ್ತಾರೆ. ಅದಕ್ಕೆ ಅವರೆಂದರೆ ಹಿರಿಯ ಕಿರಿಯರೆನ್ನದೆ ಮಕ್ಕಳು, ಯುವ ಪೀಳಿಗೆ, ಹಿರಿಯ ಕಲಾ ವಿದರೆಲ್ಲರಿಗೂ ಐತಾಳರು ಅಂದರೆ ಅಚ್ಚುಮೆಚ್ಚು. ಅವರು ಇಷ್ಟರವರೆಗೆ ಸುಮಾರು ೧೨೬ಕ್ಕಿಂತಲೂ ಹೆಚ್ಚಿನ ನಾಟಕದಲ್ಲಿ ನಟಿಸಿದ್ದಾರೆ. ಸುಮಾರು ೩೮ ನಾಟಕ ನಿರ್ದೇಶನ ಮಾಡಿದ್ದಾರೆ. ಪ್ರಮುಖ ನಿರ್ದೇಶಕರ ನಿರ್ದೇಶನದಲ್ಲಿ ಮಾಡಿದ ಹೆಗ್ಗಳಿಕೆ ಇವರದು. ಪ್ರೊ| ರಮೇಶ್, ಸಂಪತ್, ಅನಂತರಾಮ್ ಮಚ್ಚೇರಿ, ಕೆ.ಜೆ ರಾವ್, ಸಂತೋಷ್ ಬಳ್ಳಾಲ್, ಶ್ರೀಪತಿ ಬಳ್ಳಾಲ್, ಹೆಚ್. ಮೋಹನ್, ನಿಡ್ವಣ್ಣಯ್ಯ, ದುಗ್ಗಪ್ಪಯ್ಯ ಮುಂತಾದವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಗಿರಿಧರ್ ಕಾರ್ಕಳರ ಮಹಿಮಾಪುರ, ರಮೇಶ್ ಶಿವಪುರ ಅವರ ಬಾಕಿ ಇತಿಹಾಸ, ಹಗ್ಗದ ಕೊನೆ, ಅಹಲ್ಯಾ ಬಲ್ಲಾಳ್‌ರ ಮಾಯಾವಿ ಸರೋವರ, ಸದಾನಂದ ಸುವರ್ಣರ ಯಾನ್ ಪಿನಾಯೆ, ಗೋಂದೂಳು, ಉರುಳು, ಇದು ಯುನಿವರ್ಸಿಟಿ, ವಿಜಯ ಕುಮಾರ್ ಶೆಟ್ಟಿ ಅವರ ಶರಶಯ್ಯೆ, ಮೋಹನ್ ಮಾರ್ನಾಡ್ ಅವರ ನಲ್ವತ್ತರ ನಲುಗು, ಟಿಪು ಸುಲ್ತಾನ್, ಬಿಡುಗಡೆ, ದೆವ್ವನ್ ಮನೆ ಮೊದಲಾದ ನಾಟಕಗಳಲ್ಲಿ ಅಭಿನಯಿಸಿ ನಿರ್ದೇಶಕರ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಂಗಭೂಮಿಯ ಪ್ರಶಸ್ತಿ ವಿಜೇತ ನಿರ್ದೇಶಕರಾದ ಡಾ| ಭರತ್ ಕುಮಾರ್ ಪೊಲಿಪು ಅವರ ಗರಡಿಯಲ್ಲಿ ಪಳಗಿದ ಅವರು ಬದುಕು ಮನ್ನಿಸು ಪ್ರಭುವೇ, ಇನ್ನೊಬ್ಬ ದ್ರೋಣಾಚಾರ್ಯ, ಗಾಂಧಾರಿ, ಶಾಕುಂತಲ, ಆಟಿ ತಿಂಗಳ್ದ ಒಂಜಿ ದಿನ, ಆಷಾಡದ ಒಂದು ದಿನ ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ತೆರೆಗಳು, ಪಂಚಭೂತ, ಕುಂಟಾ ಕುಂಟಾ ಕುರುವತಿ, ಚಾಳೇಶ, ಅನ್ವೇಶಕರು ಇತ್ಯಾದಿ ನಾಟಕಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡವರು ನಮ್ಮ ಪ್ರಬುದ್ಧ ರಂಗಕಲಾವಿದರಾದ ಐತಾಳರು.

ರಾಮಚಂದ್ರ ಪಿಎನ್ ನಿರ್ದೇಶನದ ಈ ಟಿವಿ ಕನ್ನಡ ಧಾರಾವಾಹಿ ಸ್ವಾಮಿ ಸ್ವಾಮಿ ಮತ್ತು ಹಿಂದಿಯ ಕ್ರೆಮ್ ಪೆಟ್ರೋಲ್, ಹರಹರ ಮಹಾದೇವ, ತಮಿಳ್ ಫಿಲಂ ಮುರುಗನ್, ಸದಾನಂದ ಸುವರ್ಣರ ಗುಡ್ಡೆದ ಭೂತ, ಎನ್‌ಎಸ್‌ಡಿಸಿ ಪ್ರಸ್ತುತ ಪಡಿಸಿದ ಹಿಂದಿ ಸಿನೆಮಾ ಐಲ್ಯಾಂಡ್ ಸಿಟಿ ಹೀಗೆ ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ. ಅಷ್ಟಕ್ಕೇ ಅವರ ಪ್ರಯಾಣ ನಿಲ್ಲದೇ ಮುಂದುವರಿದು ರೇಡಿಯೋ ನಾಟಕದಲ್ಲಿ ವಾಯ್ಸ್ ಆಕ್ಟ್ ಮಾಡಿದ ಅಪೂರ್ವ ಅನುಭವವನ್ನು ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ ಜೊತೆಗೆ ಹಲವಾರು ಜಾಹೀರಾತುಗಳಿಗೆ ಕಂಠದಾನದ ಮಾಡಿದ್ದಲ್ಲದೆ ಜಾಹಿರಾತಿನಲ್ಲಿಯೂ ನಟಿಸಿದ್ದಾರೆ.

ಐತಾಳ್ ಅವರ ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬಂದ ನೀತಿ, ಶಿಸ್ತಿನಿಂದ ಅವರು ಈ ಮಟ್ಟದ ಯಶಸ್ಸನ್ನು ಪಡೆಯುವುದು ಸಾಧ್ಯವಾಯಿತು ಎನ್ನಬಹುದು. ಅವರು ನಾಟಕ ಪ್ರದರ್ಶನಕ್ಕೆ ಮೊದಲು ನಡೆಯುವ ತಾಲೀಮಿನಲ್ಲಿ ಒಂದು ದಿನವೂ ಗೈರು ಹಾಜರಾಗುವುದಿಲ್ಲ. ನಾಟಕ ಪ್ರದರ್ಶನಕ್ಕೆ ಅಣಿಯಾಗುವಾಗ ಎಲ್ಲರ ಡಯಲಾಗ್ ಐತಾಳ್ ಸರ್‌ಗೆ ನೆನಪಿರುವುದು ಅವರ ಪ್ರತಿಭೆಗೆ ಕೈಗನ್ನಡಿ. ಕರ್ನಾಟಕದ ಹಲವೆಡೆ ಮೈಸೂರು, ಮಂಗಳೂರು, ಉಡುಪಿ, ಕುಂದಾಪುರ, ಬೆಂಗಳೂರು, ಬಳ್ಳಾರಿ, ಧಾರವಾಡ, ಪುಣೆ, ಶಿವಮೊಗ್ಗ, ಸಾಣೆಹಳ್ಳಿ, ದೆಹಲಿ, ಮುಂಬಯಿ ಹೀಗೆ ಹತ್ತು ಹಲವು ಕಡೆಗಳಲ್ಲಿ ಇವರು ತಂಡದ ಜೊತೆ ಸುತ್ತಾಡಿ ನಾಟಕವನ್ನು ಪ್ರಸ್ತುತಪಡಿಸಿ ಜನಮನ್ನಣೆ ಪಡೆದಿದ್ದಾರೆ.

ಇದು ಅವರ ಪ್ರವೃತ್ತಿಯಾದರೆ ವೃತ್ತಿಯಲ್ಲಿ ಇವರೋರ್ವ ಬ್ಯಾಂಕ್ ಉದ್ಯೋಗಿ. ೩೭ ವರ್ಷ ವಿಜಯಾ ಬ್ಯಾಂಕ್‌ನಲ್ಲಿ ಕೆಲಸಮಾಡಿ ಸಹಾಯಕ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ. ಐತಾಳ್ ಅವರ ಧರ್ಮಪತ್ನಿ ಲಕ್ಷ್ಮಿ ಐತಾಳ್. ಅವರು ೩೪ ವರ್ಷ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಕೆಲಸಮಾಡಿ ಸಹಾಯಕ ಮ್ಯಾನೇಜರ್ ಆಗಿ ಸ್ವಯಂ ಸೇವಾ ನಿವೃತ್ತಿ ಹೊಂದಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳು. ಹಿರಿಯವನು ಅನಿರುದ್ಧ ಐತಾಳ್ (ಬಿಇ, ಎಂಎಸ್) ಮಾಡಿ ಬೆಲ್ಜಿಯಂನ ಟೊಯೊಟಾ ಕಂಪನಿಯಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆ. ಕಿರಿಯವನು ಅಭಿಜಿತ್ ಐತಾಳ್ (ಬಿಇ,ಎಂಎಸ್) ಮಾಡಿ ಬೆಂಗಳೂರಿನ ಟಾಟಾ ಸನ್ಸ್ ತೇಜಸ್ ನೆಟ್ ವರ್ಕಿಂಗ್ ನಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾನೆ.

ನಿಮಗೆ ಸಿಕ್ಕಿದ ಪಾತ್ರಕ್ಕೆ ಜೀವ ತುಂಬಿದ್ದೀರಿ, ಸೈಅನಿಸಿ ಕೊಂಡಿದ್ದೀರಿ ಅಂದಾಗ ರಂಗಭೂಮಿಯಲ್ಲಿ ನಾನಿನ್ನೂ ಹೆಜ್ಜೆಯೂರುತ್ತಿದ್ದ ಪುಟ್ಟ ಕಲಿಕಾಥಿ. ಕಲಿಯುವುದು ಮುಗಿ ಯುವುದಿಲ್ಲ. ಇನ್ನೂ ಬಹಳ ಇದೆ. ಅಂತಾರೆ ಐತಾಲ್ ಸರ್, ನೀವು ಈ ವಯಸ್ಸಿನಲ್ಲಿ ಮತ್ತೆ ಚುರುಕಾಗಿ, ಕ್ರಿಯಾಶೀಲರಾಗಿ ನಾಟಕದ ನಡೆಯನ್ನು ಮುನ್ನಡೆಸಲು ಈ ಪ್ರಶಸ್ತಿ ಎನರ್ಜಿಯಾಗಲಿದೆ ಅನ್ನುವುದು ನಮ್ಮೆಲ್ಲಾ ಕಲಾವಿದರ ಭಾವನೆ. ಬಾಲ್ಯದಲ್ಲಿ ಬಣ್ಣ ಹಚ್ಚುವುದು ನಮ್ಮ ಕಾಯಕ ಅಲ್ಲ ಅಂತ ಮನೋಭಾವ ತುಂಬಿಕೊಂಡಿದ್ದ ಕಾಲಕ್ಕೆ ಈ ಪುರಸ್ಕಾರವೇ ಉತ್ತರ. ಕೆವಿಆರ್ ಐತಾಳ್ ಸರ್ ತಮ್ಮ ಮುಂದಿನ ಜೀವನ ನೆಮ್ಮದಿ ಆರೋಗ್ಯದಿಂದಿರಲಿ. ಕಲಾ ಮಾತೆ ಅನುದಿನ ಕರುಣಿಸಲಿ. ನಾಟಕರಂಗದಲ್ಲಿ ಮುಂದೆಯೂ ಮೆರೆಯಬೇಕು. ಪಾತ್ರಕ್ಕೆ ಜೀವತುಂಬಿ ಇನ್ನಷ್ಟು ಯಶಸ್ಸು ಕಾಣಬೇಕು. ಮುಂದಿನ ಪೀಳಿಗೆಗೆ ತಮ್ಮ ಎಲ್ಲ ಕೆಲಸಗಳು ಮಾರ್ಗದರ್ಶನದಂತಿರಲು ಎಂದು ಮುಂಬಯಿ ತುಳು ಕನ್ನಡಿಗರ ಪರವಾಗಿ , ಕರ್ನಾಟಕ ಸಂಘ ಮಾಟುಂಗ ಕಲಾಭಾರತೀಯ ಪರವಾಗಿ ,ಕನ್ನಡ ಕಲಾವಿದರ ಪರಿಷತ್ತಿನ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತಾ ಇದ್ದೇವೆ ಎಂದು ಪ್ರತಿಭಾನ್ವಿತ ಕಲಾವಿದ ಸೂರಿ ಮಾರ್ನಾಡ್ ತಿಳಿಸಿದ್ದಾರೆ.

ಒಬ್ಬ ನಿಷ್ಠಾವಂತ ಬ್ಯಾಂಕ್ ಉದ್ಯೋಗಿಯಾಗಿ ಜವಾಬ್ದಾರಿಯುತ ರಂಗ ನಿರ್ದೇಶಕನಾಗಿ, ಪ್ರಬುದ್ಧ ರಂಗಕರ್ಮಿ ಆಗಿ, ಸುಧೀರ್ಘ ಕಾಲದಿಂದ ಕಲಾ ಸೇವೆ ಮಾಡುತ್ತಾ ಬಂದಿರುವ ಮುಂಬಯಿ ಕನ್ನಡಿಗ ಕೆ.ವಿ. ರಾಘವೇಂದ್ರ ಐತಾಳರಿಗೆ ಸಂಸ್ಕ್ರತಿ ವಿಶ್ವ ಪ್ರತಿಷ್ಠಾನ ರಿಜಿಸ್ಟರ್ಡ್ ಉಡುಪಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಜಂಟಿಯಾಗಿ ದಿನಾಂಕ ಮಾರ್ಚ್ ೨೬ ರಂದು ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ ೨೦೨೪ನ್ನು ಕೊಟ್ಟು ಗೌರವಿಸ ಲಿದೆ. ನಮ್ಮ ಇಡೀ ತಂಡದ ನಡೆ ಉಡುಪಿ ಕಡೆ ಹೆಜ್ಜೆ ಹಾಕಲು ಶುರುಮಾಡಿದೆ. ಈ ಸಂಭ್ರಮದಲ್ಲಿ ನೀವು ಪಾಲ್ಗೊಂಡರೆ ಒಬ್ಬ ಕಲಾವಿದನಿಗೆ ಅದಕ್ಕಿಂತ ದೊಡ್ಡ ಉಡುಗೊರೆ ಇನ್ನೊಂದಿಲ್ಲ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.