Skip to main content
www.kallianpur.com | Email : kallianpur7@gmail.com | Mob : 9741001849

ಕಾರಣಿಕ ಕ್ಷೇತ್ರ ಶಿಬರೂರು : ಎ.೨೨-೩೦ ಬ್ರಹ್ಮಕುಂಭಾಭಿಷೇಕ ನಾಗಮಂಡಲ ಎ.೨೭ರಿಂದ ೩೦ರ ತನಕ ವಿಶೇಷ ಜಾತ್ರಾ ಮಹೋತ್ಸವ.

By March 15, 2024News
kallianpurdotcom: 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಮಾ.೧೪: ಕರ್ನಾಟಕ ಕರಾವಳಿಯ ಶಿಬರೂರುಗುತ್ತು ಮುದ್ದಣ್ಣ ಶೆಟ್ಟರ ಮುತುವರ್ಜಿಯಲ್ಲಿ ೧೯೭೬ರಲ್ಲಿ ಶಿಬರೂರು ಕ್ಷೇತ್ರವು ಸಂಪೂರ್ಣ ನವೀಕರಣ ಗೊಂಡಿದ್ದು ೨೦೧೦ರಲ್ಲಿ ಕೊಂಜಾಲಗುತ್ತು ಪ್ರಭಾಕರ ಶೆಟ್ಟರ ನೇತೃತ್ವದಲ್ಲಿ ಹಾಗೂ ಊರವರ  ಸಹಕಾರದಿಂದ ಸುಮಾರು ೫ ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡು ಈಗ ಮತ್ತೊಮ್ಮೆ ಧ್ವಜಸ್ತಂಭ ಸಹಿತ ಸುತ್ತುಪೌಳಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷ ಕೈಗೊಂ ಡಿದ್ದು ಸುಮಾರು ೯ ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ನಡೆಯುತ್ತಿದೆ. ಕ್ಷೇತ್ರವು ದೈವ ಕ್ಷೇತ್ರ ಮಾತ್ರವಲ್ಲದೆ ನಾಗ ಕ್ಷೇತ್ರವು ಆಗಿರುತ್ತದೆ. ಕ್ಷೇತ್ರದ ವಿಶೇಷವೇನೆಂದರೆ ಬ್ರಹ್ಮಕುಂಭಾಭಿಷೇಕ ನಡೆಯುವ ಸಂದರ್ಭದಲ್ಲಿ ನಾಗ ಮಂಡಲ ಸೇವೆಯು ನಡೆಯುವುದು ಗಮನಾರ್ಹ. ಇದೇ ಬರುವ ಏಪ್ರಿಲ್ ೨೨ರಿಂದ ೩೦ರ ತನಕ ಬ್ರಹ್ಮಕುಂಭಾ ಭಿಷೇಕ ಕಾರ್ಯಕ್ರಮಗಳು ಜರಗಲಿದ್ದು ೨೬ರಂದು ಶ್ರೀ ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ ಬ್ರಹ್ಮಕುಂಭಾಭಿ ಷೇಕವು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ಶಿಬರೂರುರವರ ನೇತೃತ್ವದಲ್ಲಿ ಜರಗಲಿದೆ. ಅದೇ ದಿನ ರಾತ್ರಿ ಕ್ಷೇತ್ರದ ನಾಗಮಂಡಲ ಸೇವೆ ಜರುಗಲಿದೆ. ಎಪ್ರಿಲ್ ೨೭ರಿಂದ ೩೦ರ ತನಕ ವಿಶೇಷ ಜಾತ್ರಾ ಮಹೋತ್ಸವವು ಜರಗಲಿದ್ದು ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಬರಗುತ್ತಿನಾರ್ ಉಮೇಶ್ ಎನ್. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಳಿಕ ಮಾತಾಡಿದ ಮೊಕ್ತೇಸರ ಮಧುಕರ ಅಮೀನ್ ಅವರು,” ಕ್ಷೇತ್ರದಲ್ಲಿ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳು ವೇಗಗತಿ ಯಲ್ಲಿ ನಡೆಯುತ್ತಿದೆ. ದೈವಕ್ಕೆ ಸ್ವರ್ಣ ಪಲ್ಲಕ್ಕಿಯನ್ನು ಸೇವೆಯ ರೂಪದಲ್ಲಿ ಸಲ್ಲಿಸಲು ಚಿಂತಿಸಲಾಗಿದೆ. ರಸ್ತೆ ಅಭಿವೃದ್ಧಿ ಮತ್ತು ಗೋಪುರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬ್ರಹ್ಮ ಕುಂಭಾಭಿಷೇಕ, ನಾಗಮಂಡಲ ಸಂದರ್ಭ ದಲ್ಲಿ ಧಾರ್ಮಿಕ, ಸಾಂಸ್ಕ್ರತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಸ್ವಾಮೀಜಿಗಳ ಸಮಕ್ಷಮದಲ್ಲಿ ಧಾರ್ಮಿಕ ಮುಖಂ ಡರ ಹಾಗೂ ಅನೇಕ ಸಾಂಸ್ಕ್ರತಿಕ ತಂಡಗಳ ಹಾಗೂ ಭಜನಾ ಮಂಡಳಿಗಳ ಮುಖಾಂತರ ನಿರಂತರ ಭಜನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ” ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಮಾತಾಡಿ, “ಕಟೀಲು ಕ್ಷೇತ್ರಕ್ಕೂ ಕೊಡ ಮಣಿತ್ತಾಯ ಕ್ಷೇತ್ರಕ್ಕೂ ಅವಿನಾಭಾವ ನಂಟಿದೆ. ಕಟೀಲು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಿ ಮತ್ತು ದೈವದ ಭೇಟಿ ಅಪರೂಪವಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು ದೈವದ ಸೇವೆಯಲ್ಲಿ ಕೈಜೋಡಿಸುವ ವಿಶ್ವಾಸವಿದೆ” ಎಂದರು.

ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಮಾತನಾಡಿ, “ಕಳೆದ ೮ ತಿಂಗಳಲ್ಲಿ ೩.೫ ಕೋಟಿ ವೆಚ್ಚದ ಸಿವಿಲ್ ಕಾಮಗಾರಿ, ೧.೫ ಕೋಟಿ ರೂ. ವೆಚ್ಚದಲ್ಲಿ ಧ್ವಜಸ್ಥಂಭ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ನಿತ್ಯ ಉಪಹಾರ, ಅನ್ನದಾನ ನಡೆಯಲಿದ್ದು ರಾಜ್ಯಾ ದ್ಯಂತ ೩-೪ ಲಕ್ಷ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದೇವೆ” ಎಂದರು.

ಕೊಂಜಾಲ್ ಗುತ್ತು ಪ್ರಭಾಕರ ಶೆಟ್ಟಿ ಇವರು ಬ್ರಹ್ಮಕಲಶ ಮತ್ತು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿದ್ದು, ೨೬ ಸಮಿತಿಗಳನ್ನು ರಚಿಸಲಾಗಿದೆ. ಶ್ರೀ ಕ್ಷೇತ್ರದ ವತಿಯಿಂದ ಕೆಎಂಸಿ ಆಸ್ಪತ್ರೆ ಹಾಗೂ ದುರ್ಗಾ ಸಂಜೀವಿನಿ ಟ್ರಸ್ಟ್ ಇದರ ವತಿಯಿಂದ ಪ್ರತೀ ತಿಂಗಳು ಎರಡು ಬಾರಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ.

ಪತ್ರಿಕಾ ಗೋಷ್ಠಿಯಲ್ಲಿ ತಿಬರಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಕೊರ್ಯಾರುಗುತ್ತು ಜೀತೇಂದ್ರ ಶೆಟ್ಟಿ, ಪರ್ಲಬೈಲು ಗುತ್ತು ತುಕರಾಮ ಶೆಟ್ಟಿ, ಬ್ರಹ್ಮಕಲಶ ಹಾಗೂ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್, ಮೊಕ್ತೇ ಸರ ಮಧುಕರ ಅಮೀನ್, ಮೊಕ್ತೇಸರ ಕಾಂತಪ್ಪ ಸಾಲಿಯಾನ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಸೂರಿಂಜೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಶೆಟ್ಟಿ, ದಿವಾಕರ ಸಾಮಾನಿ, ಶಿಬರೂರು ಗುತ್ತು ಸುಧಾಕರ ಶೆಟ್ಟಿ, ಚಂದ್ರಹಾಸ ಶಿಬರೂರು, ಪ್ರಭಾಕರ ಶೆಟ್ಟಿ ಹೊಸಕಟ್ಟ, ಸುದೀಪ್ ಶೆಟ್ಟಿ, ಜಗದೀಶ ಶೆಟ್ಟಿ, ಸುರೇಂದ್ರ ಶೆಟ್ಟಿ, ವಿನೀತ್ ಶೆಟ್ಟಿ, ಗಿರೀಶ್ ಶೆಟ್ಟಿ, ಸುಪ್ರಜ ಸುಬ್ರಮಣ್ಯ ಪ್ರಸಾದ್, ಸುಮನ್ ಶೆಟ್ಟಿ, ಮಾಧ್ಯಮ ಸಮಿತಿಯ ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

ಆಂಗ್ಲ ಮಾಧ್ಯಮ ಶಾಲೆ:
ದೈವಸ್ಥಾನದ ವತಿಯಿಂದ ಪ್ರತಿ ತಿಂಗಳು ವೈದಕಿಯ ತಪಾಸಣೆ ಹಾಗೂ ದೈವಸ್ಥಾನದ ವತಿಯಿಂದ ಈಗಾಗಲೇ ಶ್ರೀ ಕೊಡ ಮಣಿತ್ತಾಯ ಆಂಗ್ಲ ಮಾಧ್ಯಮ ಶಾಲೆ ಕಳೆದ ವರ್ಷ ಎಲ್ ಕೆಜಿ ಪ್ರಾರಂಭಿಸಿದ್ದು, ಬರುವ ವರ್ಷ ನರ್ಸರಿ ಹಾಗೂ ಯುಕೆಜಿ ಪ್ರಾರಂಭಗೊಳ್ಳಲಿದೆ.

ಶಿಬರೂರು ಕ್ಷೇತ್ರದ ಇತಿಹಾಸ:
ಕೊಡಮಣಿತ್ತಾಯ ಕ್ಷೇತ್ರವು ಮಂಗಳೂರಿನಿಂದ ೨೫ ಕಿ.ಮೀ. ದೂರದಲ್ಲಿ ಕಟೀಲು ಕ್ಷೇತ್ರದಿಂದ ೨ ಕಿ.ಮೀ (ಕಿನ್ನಿಗೋಳಿಯಿಂದ ೩ ಕಿ.ಮೀ) ದೂರದಲ್ಲಿ ಪ್ರಕೃತಿ ರಮಣೀಯ ಕಾರಣಿಕ ಕ್ಷೇತ್ರವಾಗಿದ್ದು ನಂದಿನಿ ತಟದಲ್ಲಿ ಶ್ರೀ ಉಳ್ಳಾಯ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳು ಸುಮಾರು ೭೦೦ ವರ್ಷಗಳ ಹಿಂದೆ ದೈವ ಭಕ್ತರಾದ ಶಿಬರೂರು ಗುತ್ತು ತಿಮ್ಮತ್ತಿ ಕರಿವಾಳರವರ ಭಕ್ತಿಗೆ ಒಲಿದು ನೆಲೆ ನಿಂತಿವೆ. ಶ್ರೀ ಕ್ಷೇತ್ರ ಶಿಬರೂರಿಗೂ ಶ್ರೀ ಕ್ಷೇತ್ರ ಕಟೀಲಿಗೂ ಅವಿನಾಭಾವ ಸಂಬಂಧವಿದ್ದು ಕಟೀಲು ಜಾತ್ರಾ ಸಂದರ್ಭದಲ್ಲಿ ಶ್ರೀ ದೈವವು ಭೇಟಿ ನೀಡುತ್ತಿರುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಶ್ರೀ ಕ್ಷೇತ್ರವು ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಎ’ ದರ್ಜೆಯ ದೈವಸ್ಥಾನವಾಗಿದ್ದು ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಧನು ಸಂಕ್ರಮಣದಂದು ಧ್ವಜಾರೋಹಣ ಗೊಂಡು ಎಂಟು ದಿನಗಳ ಪರ್ಯಂತ ಜಾತ್ರಾ ಮಹೋತ್ಸವ ಜರುಗುತ್ತಿದ್ದು ಲಕ್ಷಾಂತರ ಭಕ್ತರ ಆರಾಧ್ಯ ಕೇಂದ್ರವಾಗಿದೆ. ಕ್ಷೇತ್ರದ ತೀರ್ಥವು ವಿಷವನ್ನು ಅಮೃತ ಮಾಡುವಂತಹ ಶಕ್ತಿಯನ್ನು ಹೊಂದಿದ್ದು ಲಕ್ಷಾಂತರ ಭಕ್ತರು ತೀರ್ಥವನ್ನು ಸೇವಿಸಿ ಧನ್ಯರಾಗುತ್ತಾರೆ.

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.