Skip to main content
www.kallianpur.com | Email : kallianpur7@gmail.com | Mob : 9741001849

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಮಾದರಿ ಚುನಾವಣೆ.

By June 16, 2023News
kallianpurdotcom : 16/06/23

ಉಡುಪಿ : “ಪ್ರಜಾಪ್ರಭುತ್ವದ ಮಹತ್ವ ಮತ್ತು ಸಂವಿಧಾನದ ಅರಿವು ವಿದ್ಯಾರ್ಥಿಗಳಿಗೆ ಎಳವೇಯಲ್ಲಿಯೇ ತಿಳಿದಿರಬೇಕು. ಮುಂದಿನ ಭಾರತ ತರಗತಿ ಕೋಣೆಗಳಲ್ಲಿ ಪರಿಪಕ್ವ ಗೊಳ್ಳುತ್ತದೆ”ಎಂದು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಸಿ. ಅನ್ಸಿಲ್ಲಾ ಡಿ’ಮೆಲ್ಲೊ ಹೇಳಿದರು. ಅವರು ವಿದ್ಯಾರ್ಥಿ ಸಂಸತ್ತಿನ ಚುನಾವಣೆಗೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿ ಸಂಘದ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ಅರ್ಜಿ ಹಿಂಪಡೆಯುವ ದಿನಾಂಕವನ್ನು ನೀಡಲಾಗಿತ್ತು. ಎರಡು ಅರ್ಜಿಗಳು ಉಮೇದ್ವಾರರು ಗೈರುಹಾಜರಾಗಿದ್ದ ಕಾರಣ ಅನರ್ಹಗೊಂಡವು. ಚುನಾವಣ ಕಣದಲ್ಲಿದ್ದ ಶಾಲಾನಾಯಕ ಹುದ್ದೆಗೆ ಹತ್ತು ಮತ್ತು ಉಪನಾಯಕ ಹುದ್ದೆಗೆ ಹದಿನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದು, ಎರಡು ದಿವಸಗಳ ಕಾಲ ಬಿರುಸಿನ ಪ್ರಚಾರ ನಡೆಸಿದರು.

ಬಹಿರಂಗ ಪ್ರಚಾರ ಅವಧಿ ಮುಗಿದ ನಂತರ ಅಭ್ಯರ್ಥಿಗಳು ತರಗತಿಗಳಿಗೆ ತೆರಳಿ ಮತಯಾಚನೆ ಮಾಡಿದರು. ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಮತದಾನಕ್ಕೆ ಅರ್ಹರಾಗಿದ್ದರು. ಮತ ಚಲಾಯಿಸುವಾಗ ತಮ್ಮ ಗುರುತು ಪತ್ರ ಇಲ್ಲದೇ ಶಾಲಾ ಕೈಪಿಡಿಯಲ್ಲಿನ ಮಾಹಿತಿ ತೋರಿಸಿ ಮತದಾನ ಮಾಡಲು ಅವಕಾಶ ಇತ್ತು. ಹಾಜರಿ ಪುಸ್ತಕವೇ ಮತದಾರರ ಪಟ್ಟಿಯಾಗಿತ್ತು. ಗುರುತು ಪತ್ರ ತೋರಿಸದೇ ಮತದಾನ ಮಾಡಲು ಬಂದ ಮತದಾರರಿಗೆ ಮತ ಚಲಾಯಿಸಲು ಅಧಿಕಾರಿಗಳು(ಶಿಕ್ಷಕರು) ನಿರಾಕರಿಸಿದಾಗ ಚುನಾವಣಾಧಿಕಾರಿ ಮತ್ತು ಅಭ್ಯರ್ಥಿಪರ ಎಜೆಂಟ್‌ಗಳ ನಡುವೆ ಮಾತಿನ ಚಕಾಮಕಿ ನಡೆದು ಚುನಾವಣಧಿಕಾರಿ ಪರಿಸ್ಥಿತಿಯನ್ನು ತಿಳಿಮಾಡಿ ಮತದಾನಕ್ಕೆ ಅವಕಾಶ ನೀಡಿದರು. ನಾಯಕ ಹುದ್ದೆಗೆ ನೀಲಿ ಮತ ಪತ್ರ ಹಾಗು ಉಪನಾಯಕ ಹುದ್ದೆಗೆ ಕೆಂಪು ಮತ ಪತ್ರ ನೀಡಿ, ಎಡಗೈ ಕಿರುಬೆರಳಿಗೆ ಮಾಸಲಾಗದ ಶಾಹಿಯನ್ನು ಹಾಕಲಾಯಿತು.

ಪ್ರಾಥಮಿಕ ಮತ್ತು ಪ್ರೌಢಶಾಲಾ ಮತದಾರರಿಗೆ ಪ್ರತ್ಯೇಕ ಬೂತುಗಳನ್ನು, ಮತಪೆಟ್ಟಿಗೆಗಳನ್ನು, ಮತ ಚಲಾಯಿಸುವ ಗೌಪ್ಯತಾ ಮೇಜಿನ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಡೆದ ಎಣಿಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಸಮ್ಮುಖ ಮತಪೆಟ್ಟಿಗೆಯನ್ನು ತೆರೆದು ಮತ ಎಣಿಕೆ ಮಾಡಲಾಯಿತು. ಶಾಲಾ ನಾಯಕಿಯಾಗಿ ಹತ್ತನೇ ತರಗತಿಯ ಸಾನೀಕಾ ಶಾಲಾ ಉಪನಾಯಕನಾಗಿ ಒಂಭತ್ತನೇ ತರಗತಿಯ ಸಚಿನ್ ಆಚಾರ್ಯ ಬಹುಮತದಿಂದ ಆಯ್ಕೆಯಾದರು. ಚುನಾವಣೆ ಪ್ರಕ್ರಿಯೆಯು ರಾಜ್ಯ, ರಾಷ್ಟ್ರ ಮಾದರಿಯಂತೆ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ಅನುಭವಿಸುವಂತೆ ಮಾಡಲಾಗಿತ್ತು. ಚುನಾವಣೆ ಅಧಿಕಾರಿಯಾಗಿ ಶಿಕ್ಷಕಿಯಾದ ನ್ಯಾನ್ಸಿ, ವನಿತಾ, ಸುಚಿತ್ರಾ, ಸುಮಂಗಲ ಸಹಕರಿಸಿದರು.

ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಶಿಕ್ಷಕ ಆಲ್ವಿನ್ ದಾಂತಿ ಮಾದರಿ ಚುನಾವಣೆ ನಡೆಸಲು ಸಹಕರಿಸಿದರು. ಮತದಾನದ ಮಹತ್ವ ಜಾಗೃತಿಯ ಹೊರತಾಗಿ ನಾಲ್ಕು ಮತಗಳು ಅಸಿಂಧುವಾಗಿದ್ದವು!!!

Leave a Reply

Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.

Hence, sending offensive comments using Kallianpur.com will be purely at your own risk, and in no way will kallianpur.com be held responsible.