
kallianpurdotcom: Mob 9741001849
(ಚಿತ್ರ /ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ (ಪಣಜಿ,ಗೋವಾ), ಏ.೧೫: ನಾಡು-ನುಡಿಗೆ ಸೇವೆ ಸಲ್ಲಿಸುವುದು ಒಂದು ಶ್ರೇಷ್ಠ ಕಾರ್ಯ ಹಾಗೆ ನಡೆದುಕೊಂಡಾಗ ಒಬ್ಬ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ. ನಾಡು ನುಡಿ ಮತ್ತು ಸಂಸ್ಕೃತಿಗಳಿಗೆ ಶ್ರದ್ಧೆ ಮತ್ತು ಭಕ್ತಿಯಿಂದ ಸೇವೆ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕನ್ನಡವೆಂದರೆ ಅದು ಬರೀ ಭಾಷೆಯಲ್ಲ, ಅದು ನಮ್ಮ ಅಸ್ತಿತ್ವ, ನಮ್ಮ ಉಸಿರು ನಮ್ಮ ಭಾವನೆ. ಕನ್ನಡಿಗರದ್ದು ಸಹಪಾಳ್ವೆ, ಸಹಾನುಭೂತಿಯ ಪರಂಪರೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಕನ್ನಡಿಗರು ಬದುಕು ಕಟ್ಟಿಕೊಂಡಿದ್ದಾರೆ. ಅವರು ಹೊರ ರಾಜ್ಯದ ಕನ್ನಡಿಗರು ಇರಬಹುದು, ಹೊರ ದೇಶದ ಕನ್ನಡಿಗರು ಇರಬಹುದು, ತಾವಿರುವ ನೆಲ ಜಲಕ್ಕೆ ಋಣಿಯಾಗಿ ನಮ್ಮ ನುಡಿ ಕಲೆ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮತ್ತು ಮುಂದಿನ ಪರಂಪರೆಗೆ ಪರಿಚಯಿಸುವ ಕೆಲಸವನ್ನು ಚಾಚು ತಪ್ಪದೇ ಮಾಡಬೇಕು ಆಗ ನಮ್ಮ ಬದುಕಿಗೆ ಒಂದು ಅರ್ಥ ಬರುತ್ತದೆ ಎಂದ ರಾಷ್ಟ್ರೀಯ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಸುಬ್ರಮಣಿ (ಪಲ್ಲವಿ ಮಣಿ) ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಹೃದಯವಾಹಿನಿ ಮಂಗಳೂರು, ಮಂಜುನಾಥ್ ಎಜ್ಯುಕೇಶನ್ ಟ್ರಸ್ಟ್ ರಿ., ಕನ್ನಡ-ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಗೋವಾ ಕದಂಬ ಪ್ರತಿಷ್ಠಾನ ಪಣಜಿ ಜಂಟಿಯಾಗಿ ಗೋವಾ ಪಣಜಿಯ ಅಶೋಕ ಪ್ಲಾಜಾ ಸಭಾಂಗಣದಲ್ಲಿನ ವಿಷ್ಣು ನಾಯ್ಕ್ ವೇದಿಕೆಯಲ್ಲಿ ಕಳೆದ ಭಾನುವಾರ (ಎ.೧೨) ಆಯೋಜಿಸಿದ್ದ ಏಕದಿನದ ೨೧ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷೆತೆ ವಹಿಸಿ ಡಾ| ಸುಬ್ರಮಣಿ ನುಡಿದರು.
ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಮತ್ತು ಎಂಎನ್‌ಎಸ್ ಆಗ್ರೋ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಮಹಾಂತೇಶ ಮಹಾಜನ್ ಜ್ಯೋತಿ ಬೆಳಗಿಸಿ ಸಮ್ಮೇಳನ ಉದ್ಘಾಟಿಸಿದರು.
ಯುನಿವರ್ಸಲ್ ಫಿಲಂ ಮೇಕರ್ಸ್ ಕೌನ್ಸಿಲ್ ಚೇರ್ಮನ್ ಎಂ ಎ ಮಮ್ಮಿ ಗಟ್ಟಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರಿನ ನೀರು ಸರಬರಾಜು ಯೋಜನೆ ನಿವೃತ್ತ ಇಂಜಿನಿಯರ್ ಶಂಸುದ್ದೀನ್, ಗೌರವ ಅತಿಥಿಗಳಾಗಿ ರಾಯಚೂರುನ ವಾಣಿಜ್ಯೋದ್ಯಮಿ ಈ ಆಂಜನೇಯ, ಗೋವಾ ಕೇಸರಿ ಪತ್ರಿಕೆಯ ಸಂಪಾದಕ ಶ್ರೀನಿವಾಸ ಪೈ, ಬ್ಯಾಂಕ್ ಅಧಿಕಾರಿ ಮತ್ತು ಕದಂಬ ಪ್ರತಿಷ್ಠಾನ ಗೋವಾ ಇದರ ಅಧ್ಯಕ್ಷ ಬಾಳೇಶ್ ಕನ್ನಡಿಗ, ವಿಶೇಷ ಆಮಂತ್ರಿತರಾಗಿ ಮಂಗಳೂರು ಮಹಾನಗರ ಪಾಲಿಕೆಯ ಎಕ್ಸಿಕ್ಯೂಟ್ ಇಂಜಿನಿಯರ್ ನಾಗರಾಜ್ ಆರ್.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ| ಶೈನಿ ಗ್ರೇಸ್, ರುದ್ರಯ್ಯ ಸ್ವಾಮಿ ಹಿರೇಮಠ, ಬಸವರಾಜ್ ಎಚ್, ಶ್ರೀಮತಿ ಭೀಮವ್ವ ಬೆಲ್ಲದ ಬಾಗೆವಾಡಿ ಇವರಿಗೆ ಹೃದಯವಂತರು ಪ್ರಶಸ್ತಿ-೨೦೨೬ ಪ್ರದಾನಿಸಿ ಗೌರವಿಸಲಾಯಿತು.
ಅಂತರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ನಗೆ ಹೊನಲು ಕಾರ್ಯಕ್ರಮ, ಶ್ರೀ ಸಾಯಿ ರಾಮನ್ ಕಲಾಕೇಂದ್ರ ತುಮಕೂರು, ಭಾರ್ಗವಿ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಬೆಂಗಳೂರು ಹಾಗೂ ರತಿಕ ಹಡಗಲಿ ಮತ್ತು ತಂಡ ಧಾರವಾಡ ನೃತ್ಯ ರೂಪಕ, ಭರತನಾಟ್ಯ ಮತ್ತು ಜಾನಪದ ನೃತ್ಯಗಳನ್ನು, ಅಮೂಲ್ಯ ಸುಜಿತ್ ಮತ್ತು ಅನು ಆನಂದ್ ಅರೆ ಶಾಸ್ತ್ರೀಯ ಮತ್ತು ಭರತನಾಟ್ಯ, ಪಣಜಿ ಮಕ್ಕಳು ಪ್ಯಾಶನ್ ಶೋ, ಪ್ರದರ್ಶಿಸಿದ್ದು, ಕರ್ನಾಟಕದಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಮಂಗಳೂರುನ ಆಫೀಸರ್ ಕ್ಲಬ್‌ನ ಕರೋಕೆ ತಂಡ ಗಾಯಕರಾದ ನಾಗರಾಜು ಆರ್ ಬಿ, ಶಿವರಾಜ್ ಪಾಂಡೇಶ್ವರ, ಶಂಸುದ್ದೀನ್, ಜಗದೀಶ್ ಪೈ, ರಿಯಾಜ್ ಮಂಗಳೂರು, ಸಂತೋಷಿ ರಾಯಚೂರು, ಚಿತ್ರ ಕಲಾವಿದೆ ಹೇಮಾ ಪಾಟೀಲ್ ಸ್ವರ-ಕುಂಚ-ಚಿತ್ರ ಕಾರ್ಯಕ್ರಮ ನೀಡಿದರು. ಪೂರ್ಣಿಮ ಎನ್ ಮತ್ತು ಸಾಗರ್ ಟಿ.ಎಸ್ ಸಮ್ಮೇಳನ ನಿರೂಪಿಸಿದರು. ರಾಷ್ಟ್ರೀಯ ಕನ್ನಡ ಸಮ್ಮೇಳನ ಸಮಿತಿ-೨೦೦೪ ಸ್ಥಾಪಕಾಧ್ಯಕ್ಷ ಇಂ| ಕೆ ಪಿ ಮಂಜುನಾಥ್ ಸಾಗರ್ ಪ್ರಾಸ್ತಾವನೆಗೈದ ವಂದಿಸಿದರು.
Disclaimer: Please write your correct name and email address. Kindly do not post any personal, abusive, defamatory, infringing, obscene, indecent, discriminatory or unlawful or similar comments. www.kallianpur.com will not be responsible for any defamatory message posted under this article.
Hence, sending offensive comments using Kallianpur.com will be purely at your own risk, and in no way will kallianpur.com be held responsible.